ಪ್ರಾತಿನಿಧಿಕ ಚಿತ್ರ
ಸಿಂಧನೂರು: ಸೋಮವಾರ ರಾತ್ರಿ ಕಲಬುರಗಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಕೆಆರ್‌ಟಿಸಿಯ ವೇಗದೂತ ಬಸ್ ಅನ್ನು ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ ನಿಲ್ಲಿಸಿಲ್ಲ ಎನ್ನುವ ವಿಷಯಕ್ಕೆ ಚಾಲಕ ಮತ್ತು ಪ್ರಯಾಣಿಕನ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಇಬ್ಬರ ಮೇಲೆಯೂ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ರಾತ್ರಿ 11 ಗಂಟೆಗೆ ವೇಗದೂತ ಬಸ್ ಸಿಂಧನೂರು ತಲುಪಿದೆ. ಸಿಂಧನೂರಿನ ಪ್ರಯಾಣಿಕ ಸೈಯದ್ ಫಾರೂಕ್ ಹುಸೇನ್ ಬಸ್ ಅನ್ನು ಮಹಾತ್ಮ ಗಾಂಧಿ ವೃತ್ತದ ಬಳಿ ನಿಲ್ಲಿಸುವಂತೆ ಚಾಲಕ ಹರೀಶ್ ಶರಣು ಅವರಿಗೆ ವಿನಂತಿ ಮಾಡಿದ್ದಾರೆ. ಆದರೆ, ಚಾಲಕ ವೃತ್ತದಿಂದ ಸ್ವಲ್ಪ ದೂರದಲ್ಲಿರುವ ತಾಲ್ಲೂಕು ಪಂಚಾಯಿತಿ ಬಳಿ ಬಸ್ ನಿಲ್ಲಿಸಿದ್ದರಿಂದ ಕುಪಿತಗೊಂಡ ಪ್ರಯಾಣಿಕ ಬಸ್ ನಿಲ್ದಾಣದವರೆಗೂ ತೆರಳಿ ತನ್ನ ಗೆಳೆಯರನ್ನು ಕರೆಸಿಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಇದರಿಂದ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದನ್ನು ತಿಳಿಗೊಳಿಸಲು ಪೊಲೀಸರು ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಸ್ ಅನ್ನು ಡಿಪೊದಲ್ಲಿ ಬಿಟ್ಟು ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ಬೆಳಿಗ್ಗೆ ಚಾಲಕ ಮತ್ತು ಪ್ರಯಾಣಿಕ ಇಬ್ಬರೂ ಪೊಲೀಸ್ ಠಾಣೆಗೆ ಬಂದು ತಪ್ಪಾಗಿದೆ ಎಂದು ಪರಸ್ಪರ ಮುಚ್ಚಳಿಕೆ ಪತ್ರ ಬರೆದು ಕೊಟ್ಟು ಹೋಗಿದ್ದಾರೆ.
ಬಸ್ ನಿಲ್ದಾಣದಲ್ಲಿ ಪರಸ್ಪರ ಮಾರಾಮಾರಿ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರ ಶಾಂತಿಗೆ ಭಂಗ ತಂದಿದ್ದಾರೆ. ಪ್ರಯಾಣಿಕರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದಾರೆ ಎಂದು ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.