ADVERTISEMENT

ಬಹುಮುಖ ಪ್ರತಿಭೆಯ ಸಿರವಾರದ ಸೂಗಣ್ಣ

ವಿದ್ಯಾರ್ಥಿಗಳಿಗೆ ನಾಟಕ ಅಭಿನಯದ ಅಭಿರುಚಿ ಬೆಳೆಸಿದ ಕಲಾವಿದ

ಪಿ.ಕೃಷ್ಣ
Published 16 ನವೆಂಬರ್ 2019, 19:45 IST
Last Updated 16 ನವೆಂಬರ್ 2019, 19:45 IST
   

ಸಿರವಾರ: ಸಾಧಿಸುವ ಛಲ, ಕೆಲಸದಲ್ಲಿ ಶ್ರದ್ಧೆಯಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಇಲ್ಲೊಬ್ಬ ಕಲಾವಿದ ತಮ್ಮ ಬಹುಮುಖ ಪ್ರತಿಭೆಯ ಮೂಲಕ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ನಾಟಕ ನಿರ್ದೇಶನ, ನಟನೆ, ಡ್ರಾಮ ಶೆಡ್‌ಗಳ ನಿರ್ಮಾಣ, ಕಲಾಕೃತಿಗಳ ನಿರ್ಮಾಣ ಮಾಡುವ ಮೂಲಕ ಸಿರವಾರದ ಸೂಗಣ್ಣ ಸಣ್ಣಯ್ಯ ಬಡಿಗೇರ್ ಜಿಲ್ಲೆಯಲ್ಲಿ ಗುರ್ತಿಸಿಕೊಂಡಿದ್ದಾರೆ.

ಹಂಪಿ ವಿಶ್ವವಿದ್ಯಾಲಯಲ್ಲಿ ಡ್ರಾಮಾ ಡಿಪ್ಲೊಮಾ ಪದವಿ ಮುಗಿಸಿರುವ ಸೂಗಣ್ಣ ಅವರು, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಅವಕಾಶ ಪಡೆಯಲು ಬೆಂಗಳೂರಿಗೆ ತೆರಳಿ ಅಲ್ಲಿ ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ‘ಮನೆ ಮಾರಾಟಕ್ಕಿದೆ’ ಸಿನಿಮಾ ಖ್ಯಾತಿಯ ನೇಪಾಲ್ ಸತೀಶ ಅವರ ನೆರವಿನಿಂದ ಸಿನಿಮಾರಂಗದಲ್ಲಿ ಅವಕಾಶ ಪಡೆದುಕೊಂಡು ಮಾಡ್ರನ್ ಮಹಾಭಾರತ, ಕಲಬೆರಕೆ ಸಿನಿಮಾದಲ್ಲಿ ಸಹ ನಟನಾಗಿ ಅಭಿನಯಿಸಿದ್ದಾರೆ. ಅಲ್ಲದೇ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ ಸಹಗಮನ, ಕಾಲದ ಕಡಲು, ಈಟಿವಿಯ ಮಧುಬಾಲ,ನಾಗಿಣಿ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.

ADVERTISEMENT

ಬೆಂಗಳೂರಿನ ಕಲಾಗ್ರಾಮದಲ್ಲಿ ಕುವೆಂಪು ಕಾದಂಬರಿ ಆಧಾರಿತ ಸಿ.ಬಸವಲಿಂಗಯ್ಯ ನಿರ್ದೇಶನದ ‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ ನಿರಂತರ 64 ಪ್ರದರ್ಶನಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸಿರವಾರದಲ್ಲಿ 'ನಮ್ಮೊಳಗಿನ ಮೋಸಗಾರ' ಎಂಬ ನಾಟಕವನ್ನು ರಚಿಸಿ, ನಿರ್ದೇಶಿಸಿ ಅದರಲ್ಲಿ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ನಾಟಕ ಕಲೆಯ ಬಗ್ಗೆ ಅಭಿರುಚಿ ಬೆಳೆಸಿದ್ದಾರೆ. ಸೂಗಣ್ಣ ನಿರ್ದೇಶನ ಮೂಡಿಬಂದ ‘ಅಶ್ವತ್ಥಾಮ’ ಎಂಬ ಏಕಾಭಿನಯ ನಾಟಕವು ರಾಜ್ಯಮಟ್ಟದಲ್ಲಿ ಹೆಸರು ಪಡೆದಿದ್ದು, ಈ ನಾಟಕದಲ್ಲಿ ತಾಲ್ಲೂಕಿನ ಜಕ್ಕಲದಿನ್ನಿಯ ಬಸವಲಿಂಗ ವಿದ್ಯಾರ್ಥಿಯು ಅಭಿನಯಿಸಿದ್ದಾನೆ.

ರಾಯಚೂರಿನ ಗ್ರೀನ್ ಸಿಟಿ ಸಹಯೋಗದಲ್ಲಿ ಪರಿಸರ ಸ್ನೇಹಿ ಗಣಪ ಅರಿವು ಮೂಡಿಸುವುದು ಸೇರಿದಂತೆ ವಿವಿಧೆಡೆ ಉಚಿತ ಮಣ್ಣಿನ ಮೂರ್ತಿ ತರಬೇತಿ ಶಿಬಿರ ನಡೆಸಿದ್ದಾರೆ. ಕೋಲಾರ ತೋಟಗಾರಿಕೆ ಕಾಲೇಜು, ರಾಯಚೂರಿನ ಕೃಷಿ ಕಾಲೇಜು, ಬೆಂಗಳೂರು ಜಿಕೆವಿಕೆ ಅಗ್ರಿಕಲ್ಚರಲ್ ಕಾಲೇಜು ಮತ್ತು ಪುದುಚೇರಿ ಕೃಷಿ ಕಾಲೇಜುಗಳಲ್ಲಿ ನಡೆದ ನಾಟಕ ಪ್ರದರ್ಶನದಲ್ಲಿ ಡ್ರಾಮಾ ಶೆಡ್‌ಗಳನ್ನು ನಿರ್ಮಿಸಿ ಪ್ರತಿಭೆ ಅನಾವರಣಗೊಳಿಸಿದ್ದಾರೆ.

ಸದ್ಯ ಪಟ್ಟಣದಲ್ಲಿ ಜ್ಯುವೆಲ್ಲರಿ ಅಂಗಡಿ ಇಟ್ಟುಕೊಂಡಿರುವ ಸೂಗಣ್ಣ ಅವರು, ಕಂಚು, ಬೆಳ್ಳಿ, ಸಿಮೆಂಟ್‌ ಬಳಸಿ ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಸೇರಿದಂತೆ ಹಲವು ಮಹನೀಯರು, ದೇವರ ಮೂರ್ತಿಗಳ ಕಲಾಕೃತಿ ನಿರ್ಮಾಣದಲ್ಲಿ ನಿರತನಾಗಿದ್ದಾರೆ. ತಾಲ್ಲೂಕಿನ ನವಲಕಲ್ಲು ಬೃಹನ್ಮಠದ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯರ ಕಲಾಕೃತಿಯು ಹೆಚ್ಚು ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.