ADVERTISEMENT

ಸಿಂಧನೂರು: ವರ್ಗಾವಣೆ, ಫಾರಂ 3, ಬಿ ಖಾತೆಗಾಗಿ ಪರದಾಟ

ಸಿಂಧನೂರು: ಪ್ರಭಾರಿ ಪೌರಾಯುಕ್ತರಿಗೆ ಎರಡು ಕಡೆ ಕಾರ್ಯದ ಒತ್ತಡ

ಡಿ.ಎಚ್.ಕಂಬಳಿ
Published 17 ಜುಲೈ 2025, 5:01 IST
Last Updated 17 ಜುಲೈ 2025, 5:01 IST
ಸಿಂಧನೂರು ನಗರಸಭೆ ಕಚೇರಿ ಮುನ್ನೋಟ
ಸಿಂಧನೂರು ನಗರಸಭೆ ಕಚೇರಿ ಮುನ್ನೋಟ   

ಸಿಂಧನೂರು: ನಗರಸಭೆ ಕಚೇರಿಯಲ್ಲಿ ಖಾತಾ ವರ್ಗಾವಣೆ, ಫಾರಂ ನಂ.3 ಮತ್ತು ‘ಬಿ’ ಖಾತೆ ಪಡೆಯಲು ಸಾರ್ವಜನಿಕರು ಪರದಾಡುತ್ತಿರುವುದು ಸಾಮಾನ್ಯವಾಗಿದೆ.

ನಿಯಮಾನುಸಾರ 40 ದಿನದೊಳಗ ಖಾತೆ ವರ್ಗಾವಣೆ ಆಗಬೇಕು. 8 ದಿನದೊಳಗೆ ಫಾರಂ ನಂ.3 ಕೊಡಬೇಕು. ಆದರೆ ನಾಲ್ಕೈದು ತಿಂಗಳಾದರೂ ವರ್ಗಾವಣೆ ಆಗುತ್ತಿಲ್ಲ. ತಿಂಗಳಾದರೂ ಫಾರಂ ನಂ.3 ಸಿಗುತ್ತಿಲ್ಲ. ಎರಡು ಗುಂಟೆಗಿಂತ ಅಧಿಕ ನಿವೇಶನವಿದ್ದರೆ ಬಿ.ಖಾತೆಯ ದಾಖಲಾತಿಯನ್ನೇ ಕೊಡುವುದಿಲ್ಲ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.

ಪೌರಾಯುಕ್ತೆ ಶೃತಿ.ಕೆ ಅವರು ಮೂಲತಃ ಭೂ ಸ್ವಾಧೀನ ಅಧಿಕಾರಿಯಾಗಿದ್ದು, ಸದ್ಯ ನಗರಸಭೆಯಲ್ಲಿ ಪ್ರಭಾರಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಬಾಹುಳ್ಯದ ಕಾರಣಕ್ಕಾಗಿ ನಗರಸಭೆಯಲ್ಲಿ ಕೆಲ ದಾಖಲಾತಿಗಳ ವಿಲೇವಾರಿಗೆ ತೊಂದರೆಯಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನೆರೆಯ ತಾಲ್ಲೂಕು ಮಾನ್ವಿಯಲ್ಲಿ ನಾಲ್ಕು ಗುಂಟೆ ಮತ್ತು ಐದು ಗುಂಟೆ ಇದ್ದರೂ ‘ಬಿ’ ಖಾತೆಯ ದಾಖಲಾತಿ ಕೊಡಲಾಗುತ್ತಿದೆ. ಆದರೆ ಸಿಂಧನೂರಿನಲ್ಲಿ 2 ಗುಂಟೆಗಿಂತ ಹೆಚ್ಚು ಜಾಗವಿದ್ದರೆ ಕೊಡಬಾರದು ಕಾನೂನು ಇದೆಯೇ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಬಿಲ್ ಕಲೆಕ್ಟರ್, ಆರ್‌ಒ, ಆರ್‌ಐ ಮುಖಾಂತರ ಪೌರಾಯುಕ್ತರ ಲಾಗಿನ್‍ಗೆ ಹೋಗುವಷ್ಟರಲ್ಲಿ ಮೂರ್ನಾಲ್ಕು ತಿಂಗಳು ಬೇಕಾಗುತ್ತಿದೆ. ಪೌರಾಯುಕ್ತರು ತಾವು ಪ್ರಭಾರ ವಹಿಸಿಕೊಳ್ಳುವುದಕ್ಕಿಂತ ಮೊದಲು ಇದ್ದ ಕಡತಗಳಿಗೆ ಅನುಮತಿ ನೀಡುತ್ತಿಲ್ಲ. ಹಾಗಾದರೆ ಹಿಂದೆ ವರ್ಗಾವಣೆಗಾಗಿ ಮತ್ತಿತರ ದಾಖಲಾತಿಗಳನ್ನು ಪಡೆಯಲು ಅರ್ಜಿ ಹಾಕಿದ್ದ ಸಾರ್ವಜನಿಕರ ಪಾಡೇನು ಎಂದು ಪ್ರಶ್ನಿಸಿದ ಹರಿಶ್ಚಂದ್ರ ಹಾಗೂ ಶರಣಪ್ಪ ‘ಬಿಲ್ ಕಲೆಕ್ಟರ್‌ಗಳ ಕೈ ಬೆಚ್ಚಗೆ ಮಾಡಿದರೆ ಒಂದು ವಾರದ ಒಳಗೆ ಫಾರಂ ನಂ.3 ಮನೆಗೇ ಮುಟ್ಟಿಸುತ್ತಾರೆ’ ಎಂದು ಆಪಾದಿಸಿದ್ದಾರೆ.

ಈ ಕುರಿತು ಪ್ರಭಾರಿ ಪೌರಾಯುಕ್ತೆ ಶೃತಿ.ಕೆ, ‘ವರ್ಗಾವಣೆ ಮತ್ತು ಫಾರಂ ನಂ.3 ಕೋರಿ ಬಂದ ಅರ್ಜಿಗಳು ನಿಯಮಾನುಸಾರ ಇದ್ದರೆ ಯಾವುದೇ ವಿಳಂಬ ಮಾಡದೆ ಅನುಮತಿ ನೀಡುತ್ತೇನೆ. ನನ್ನ ಲಾಗಿನ್‍ನಲ್ಲಿ ಯಾವುದೇ ಕಡತಗಳು ಬಾಕಿ ಇಲ್ಲ. ಸರ್ಕಾರಿ ಕೆಲಸದ ನಿಮಿತ್ತ ರಾಯಚೂರು, ಬೆಂಗಳೂರು ಅಥವಾ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಂದ ಸಮಯದಲ್ಲಿ ಕಚೇರಿಗೆ ಹೋಗಿ ಸಹಿ ಮಾಡಲು ಆಗಿಲ್ಲ. ಉಳಿದ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಂಡಿಲ್ಲ’ ಎಂದು ಪ್ರತಿಕ್ರಿಯಿಸಿದರು.

ನಗರಸಭೆಯಲ್ಲಿ ಆಡಳಿತ ಯಂತ್ರವೇ ಕುಸಿದಿದೆ. ಒಬ್ಬರ ಮಾತು ಇನ್ನೊಬ್ಬರು ಕೇಳದಂತಾಗಿದೆ. ಪ್ರಭಾರಿ ಪೌರಾಯುಕ್ತರಾಗಿರುವುದರಿಂದ ಈ ಸಮಸ್ಯೆ ಸೃಷ್ಠಿಯಾಗಿದೆ ಎಂದು ನಗರಸಭೆ ಸದಸ್ಯ ಕೆ.ಜಿಲಾನಿಪಾಷಾ ಅಭಿಪ್ರಾಯಪಟ್ಟಿದ್ದಾರೆ.

5 ಗುಂಟೆ ನಿವೇಶನ ಹೊಂದಿರುವ ನಾನು ‘ಬಿ’ ಖಾತೆಯಡಿಯಲ್ಲಿ ಫಾರಂ ನಂ.3 ಕೊಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿ 2 ತಿಂಗಳಾದರೂ ಏನೂ ಹೇಳಿಲ್ಲ. ಈಗ 5 ಗುಂಟೆ ಇದ್ದರೆ ಮಾತ್ರ ಕೊಡಲು ಬರುವುದಿಲ್ಲ. 2 ಗುಂಟೆ ಒಳಗೆ ಇದ್ದರೆ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎನ್.ಭೀಮನಗೌಡ ಶರಣಬಸವೇಶ್ವರ ಕಾಲೊನಿ ವರ್ಗಾವಣೆ ಫಾರಂ ನಂ.3 ನವೀಕರಣ ಮತ್ತು ಹೊಸ ಖಾತೆಗಳಿಗೆ ಅನುಮತಿ ನೀಡಲಾಗುತ್ತಿದೆ. ‘ಬಿ’ ಖಾತೆಗೆ ಸಂಬಂಧಿಸಿದ ಗೊಂದಲಗಳನ್ನು ಶೀಘ್ರದಲ್ಲಿ ಬಗೆಹರಿಸುತ್ತೇವೆ 
ಮಂಜುಳಾ ಪ್ರಭುರಾಜ್ ನಗರಸಭೆ  ಅಧ್ಯಕ್ಷೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.