ADVERTISEMENT

22 ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ: ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಬಾಲಕಾರ್ಮಿಕ ಯೋಜನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 14:01 IST
Last Updated 10 ಮಾರ್ಚ್ 2021, 14:01 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯಿಂದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಬುಧವಾರ ನಡೆಯಿತು
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯಿಂದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಬುಧವಾರ ನಡೆಯಿತು   

ರಾಯಚೂರು: ಶಾಲೆಯಿಂದ ಹೊರಗುಳಿದ 14 ವರ್ಷದೊಳಗಿನ ಮಕ್ಕಳು ಹಾಗೂ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ 18 ವರ್ಷದೊಳಗಿನ ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಪೋರ್ಸ್ ಸಮಿತಿಯಿಂದ ಮಾರ್ಚ್22ರಿಂದ 10 ದಿನಗಳ ಕಾಲ ಸಮೀಕ್ಷೆ ಮಾಡಿ ನಿಖರ ಅಂಕಿ ಅಂಶ ಸಂಗ್ರಹಿಸಿ ವರದಿ ಸಲ್ಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯಿಂದ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

14 ವರ್ಷದೊಳಗಿನ ಮಕ್ಕಳ ದುಡಿಮೆ ಕಾನೂನು ಪ್ರಕಾರ ನಿಷೇಧ ಹಾಗೂ ಅಪರಾಧವಾಗಿದೆ. ಗಣಿಗಾರಿಕೆ, ದಹನಕಾರಿ, ಸ್ಪೋಟಕ ವಸ್ತುಗಳ ಕಾರ್ಖಾನೆಗಳಂತಹ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಯುವುದು ನಿಷೇಧವಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಟಾಸ್ಕ್ ಪೋರ್ಸ್ ಸಮಿತಿಯಿಂದ ಎಲ್ಲಾ ಸದಸ್ಯರು ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಪೂರ್ವಸಿದ್ಧತೆ ಹಾಗೂ ವ್ಯವಸ್ಥಿತವಾಗಿ ಕಾರ್ಯಯೋಜನೆ ರೂಪಿಸಬೇಕು. ಬಾಲಕಾರ್ಮಿಕರ ನಿರ್ಮೂಲನೆಗೆ ಡ್ಡೆಗಳ ಮೇಲೆ ಹೆಚ್ಚೆಚ್ಚು ದಾಳಿ ನಡೆಸಬೇಕು. ಅಪಾಯಕಾರಿ ಕ್ಷೇತ್ರಗಳಲ್ಲಿ ಹೆಚ್ಚಾಗಿ ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಹೆಚ್ಚಾಗಿ ಕಂಡುಬರುತ್ತಿದ್ದು ಮಕ್ಕಳ ರಕ್ಷಣೆ ಆಗಬೇಕು ಎಂದರು.

ADVERTISEMENT

ದಾಳಿ ಮಾಡಿದಾಗ ಆರ್‌ಟಿಒ ಅಧಿಕಾರಿಗಳು ಮಕ್ಕಳ ಸಾಗಣೆ ಮಾಡುವವರ ವಾಹನ ಪರವಾನಗಿ ರದ್ದು ಮಾಡಿ ಪ್ರಕರಣ ದಾಖಲಿಸಬೇಕು. ಮಕ್ಕಳ ಸಮೀಕ್ಷೆಗೆ ಒಬ್ಬ ನೋಡಲ್ ಅಧಿಕಾರಿ ಹಾಗೂ ಮೇಲ್ವಿಚಾರಣಾ ಅಧಿಕಾರಿ ನೇಮಿಸಿಕೊಳ್ಳಬೇಕು. ಸ್ವಯಂ ಸೇವಾ ಸಂಸ್ಥೆಯ ಸದಸ್ಯರಿಗೂ ಸೇರಿಸಿ ಭತ್ಯ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಬಾಲಕಾರ್ಮಿಕ ಸಮೀಕ್ಷೆಗೆ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಈ ಹಿಂದೆ ನಿಡುತ್ತಿದ್ದ ದಿನಕ್ಕೆ ₹150 ಯಾವುದಕ್ಕೂ ಸಾಲುವುದಿಲ್ಲ, ಪೆಟ್ರೋಲ್ ದರ ಹೆಚ್ಚಾಗಿರುವಕಾರಣ ₹350 ನೀಡಬೇಕು ಎಂದು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹೇಳಿದರು.

ಈ ಬಗ್ಗೆ ಸರ್ಕಾರದ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ₹200 ಹೆಚ್ಚಿಸಲಾಗುವುದು. ಸಮೀಕ್ಷೆಯಲ್ಲಿ ಚಾಚು ತಪ್ಪದೇ ಭಾಗವಹಿಸಬೇಕು. ಇಲ್ಲದೇ ಹೋದಲ್ಲಿ ಗೌರವಧನ ಪಾವತಿ ಮಾಡುವುದಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ದಾಳಿಯನಂತರ ಮಕ್ಕಳನ್ನು ಬಾಲಕಾರ್ಮಿಕ ತರಬೇತಿ ಕೇಂದ್ರಕ್ಕೆ ಹಸ್ತಾಂತರಿಸಿ 6 ತಿಂಗಳಿನಿಂದ 2 ವರ್ಷ ರಕ್ಷಣೆ ಮಾಡಬೇಕು. ಆನಂತರ ವಸತಿ ಶಾಲೆಗಳಿಗೆ ಸೇರಿಸಬೇಕು. ಇದಕ್ಕೆ ಶೇ 25ರಷ್ಟು ಈ ಮಕ್ಕಳಿಗೆ ಮೀಸಲಾತಿ ಒದಗಿಸಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮಂಜುನಾಥರೆಡ್ಡಿ ಮಾತನಾಡಿ, 896 ಮಕ್ಕಳಿಗೆ ಬಾಲಕಾರ್ಮಿಕ ತರಬೇತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. 466 ಮಕ್ಕಳನ್ನು ವಯಸ್ಕರ ಶಿಕ್ಷಣ ಇಲಾಖೆಯವರು ವರದಿ ನೀಡಬೇಕಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ವೃಷಭೇಂದ್ರಸ್ವಾಮಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ಜಯಶ್ರೀ ಚೆನ್ನಾಳ,ಜಿಲ್ಲಾ ಕಾರ್ಮಿಕ ಅಧಿಕಾರಿ ನಾಜೀಯಾ ಸುಲ್ತಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಆರ್ಟಿಒ, ಕಾರ್ಮಿಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.