ADVERTISEMENT

ಜಾಗತಿಕ ಮಟ್ಟದ ಜ್ಞಾನ ಬೆಳೆಸಿಕೊಳ್ಳಿ- ಶಿಲ್ಪಾ ಮೆಡಿಕೇರ್‌ ಚೇರಮನ್‌ ವಿಷ್ಣುಕಾಂತ

ಶಿಲ್ಪಾ ಮೆಡಿಕೇರ್‌ ಚೇರಮನ್‌ ವಿಷ್ಣುಕಾಂತ ಬೂತಡಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 13:24 IST
Last Updated 7 ಜನವರಿ 2022, 13:24 IST
ರಾಯಚೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ನಿಂದ ಶುಕ್ರವಾರ ಏರ್ಪಡಿಸಿದ್ದ ‘ಸ್ಪರ್ಧಾತ್ಮಕ ಪರೀಕ್ಷೆ’ ಕುರಿತ ಕಾರ್ಯಕ್ರಮದಲ್ಲಿ ಶಿಲ್ಪಾ ಮೆಡಿಕೇರ್‌ ಚೇರಮನ್‌ ವಿಷ್ಣುಕಾಂತ ಬೂತಡಾ ಅವರು ‘ಮಾಸ್ಟರ್‌ ಮೈಂಡ್‌ ಡಿಜಿಟಲ್‌ ಇ ಪೇಪರ್‌’ಗೆ ವಿದ್ಯಾರ್ಥಿನಿಯೊಬ್ಬರಿಗೆ ಲಾಗ್‌ಇನ್‌ ಮಾಡಿಕೊಟ್ಟು ಉದ್ಘಾಟಿಸಿದರು
ರಾಯಚೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ನಿಂದ ಶುಕ್ರವಾರ ಏರ್ಪಡಿಸಿದ್ದ ‘ಸ್ಪರ್ಧಾತ್ಮಕ ಪರೀಕ್ಷೆ’ ಕುರಿತ ಕಾರ್ಯಕ್ರಮದಲ್ಲಿ ಶಿಲ್ಪಾ ಮೆಡಿಕೇರ್‌ ಚೇರಮನ್‌ ವಿಷ್ಣುಕಾಂತ ಬೂತಡಾ ಅವರು ‘ಮಾಸ್ಟರ್‌ ಮೈಂಡ್‌ ಡಿಜಿಟಲ್‌ ಇ ಪೇಪರ್‌’ಗೆ ವಿದ್ಯಾರ್ಥಿನಿಯೊಬ್ಬರಿಗೆ ಲಾಗ್‌ಇನ್‌ ಮಾಡಿಕೊಟ್ಟು ಉದ್ಘಾಟಿಸಿದರು   

ರಾಯಚೂರು: ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಶಿಲ್ಪಾ ಮೆಡಿಕೆರ್‌ ವಿಷ್ಣುಕಾಂತ ಬೂತಡಾ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಲ್ಪಾ ಮೆಡಿಕೇರ್‌, ಶಿಲ್ಪಾ ಫೌಂಡೇಶನ್‌, ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಕೋಶದಿಂದ ಶುಕ್ರವಾರ ಆಯೋಜಿಸಿದ್ದ ‘ಎಕ್ಸಾಂ ಮಾಸ್ಟರ್‌ ಮೈಂಡ್‌ ಡಿಜಿಟಲ್‌ ಇ–ಪೇಪರ್‌’ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ಹಾಗೂ ಜಾಗತಿಕಮಟ್ಟದಿಂದ ಸ್ಥಳೀಯ ಮಟ್ಟಕ್ಕೆ ತಲುಪುವುದಕ್ಕೆ ಈಗ ಅವಕಾಶವಿದೆ. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ರಾಯಚೂರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಜಾಗತಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನವನ್ನು ‘ಮಾಸ್ಟರ್‌ ಮೈಂಡ್‌ ಇ–ಪೇಪರ್‌’ ಮಾಡುತ್ತಿದೆ ಎಂದರು.

ADVERTISEMENT

ಸ್ಥಳೀಯ ಮಟ್ಟದಲ್ಲಿ ಅನುಸರಿಸುವ ನಿಯಮಾವಳಿಗಳು ಬೇರೆ ಕಡೆಯಲ್ಲಿ ಇರುವುದಿಲ್ಲ. ಅಲ್ಲಿರುವ ನಿಯಮಗಳನ್ನು ತಿಳಿದುಕೊಳ್ಳುವುದಕ್ಕೆ ಜಾಗತೀಕರಣ ಅವಕಾಶ ಮಾಡಿಕೊಟ್ಟಿದೆ. ಪ್ರತಿಯೊಂದು ಹಂತದಲ್ಲಿ ಸವಾಲುಗಳನ್ನು ಎದುರಿಸುವುದಕ್ಕೆ ಸಿದ್ಧವಾಗಿರಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪ್ರಪಂಚದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವವರು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲೇಬೇಕು. ಏಕಾಂಗಿಯಾಗಿ ಏನಾದರೂ ಸಾಧನೆ ಮಾಡುತ್ತೇನೆ ಎನ್ನುವುದಕ್ಕಿಂತ ತಂಡವಾಗಿ ಸಾಧನೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

ಎಲ್ಲರೊಂದಿಗೆ ನಾನೂ ಬೆಳೆಯಬೇಕು ಎನ್ನುವ ಮನೋಭಾವ ಇರಬೇಕು. ಬೇರೆಯವರನ್ನು ನಿರ್ಲಕ್ಷಿಸಿ ಬೆಳೆಯುವುದಕ್ಕೆ ಆಗುವುದಿಲ್ಲ. ಸರಳವಾಗಿ ಯಾವುದೂ ಸಿಗುವುದಿಲ್ಲ. ತಾಳ್ಮೆ ವಹಿಸಿ ಪರಿಶ್ರಮ ವಹಿಸಿದರೆ ಖಂಡಿತವಾಗಿಯೂ ಗುರಿ ಸಾಧಿಸುವುದಕ್ಕೆ ಸಾಧ್ಯ ಎಂದು ಹೇಳಿದರು.

ಶಿಲ್ಪಾ ಮೆಡಿಕೇರ್‌ ಮತ್ತು ಶಿಲ್ಪಾ ಫೌಂಡೇಶನ್‌ ಮೂಲಕ ರಾಯಚೂರಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಗ್ರಾಮೀಣ ಭಾಗದ ಶಾಲೆಗಳಿಗೆ ಬೆಂಚ್‌ ವ್ಯವಸ್ಥೆ ಮಾಡಲಾಗುತ್ತಿದೆ. ರಾಯಚೂರು ಹಸಿರಾಗಿ ಕಾಣಬೇಕು ಎನ್ನುವುದು ಶಿಲ್ಪಾ ಮೆಡಿಕೇರ್‌ ಆಶಯ. ಇದಕ್ಕಾಗಿ ‘ಗ್ರೀನ್‌ ರಾಯಚೂರು’ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರು ತಮ್ಮತಮ್ಮ ಮನೆ ಪಕ್ಕದಲ್ಲಿ ಕನಿಷ್ಠ ಒಂದಾದರೂ ಸಸಿ ನೆಟ್ಟು ಬೆಳೆಸಬೇಕು. ಈ ಒಂದು ಮರದಿಂದ ಅನೇಕ ತಲೆಮಾರುಗಳ ನೆನಪು ಕುಟುಂಬದಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದು ತಿಳಿಸಿದರು.

‘ಪ್ರಜಾವಾಣಿ’ ಜಿಲ್ಲಾ ಪ್ರಸರಣ ಪ್ರತಿನಿಧಿ ಅಮರೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉದ್ಯೋಗ ಮತ್ತು ತರಬೇತಿಕ ಕೇಂದ್ರದ ಸಂಚಾಲಕ ಜೆ.ಎಲ್‌.ಈರಣ್ಣ ಸ್ವಾಗತಿಸಿದರು. ಉದ್ಯೋಗ ಮತ್ತು ತರಬೇತಿ ಕೇಂದ್ರ (ಪಿಜಿ) ಸಂಚಾಲಕ ಡಾ.ಶಿವರಾಜಪ್ಪ ವಂದಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಯಂಕಣ್ಣ ಅಧ್ಯಕ್ಷತೆ ವಹಿಸಿದ್ದರು. ಇಕ್ಯುಎಸಿ ಸಂಚಾಲಕರಾದ ಮಹಾಂತೇಶ ಅಂಗಡಿ, ಇಶ್ರತ್‌ ಬೇಗಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.