ರಾಯಚೂರು: ‘ರೈತ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಯಶ ಸಾಧಿಸಲು ಸಾಧ್ಯವಿದೆ. ಕೃಷಿಯ ಜತೆಗೆ ಜಾನುವಾರು ಪಾಲನೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ಹೇಳಿದರು.
ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಕೃಷಿ ಸಖಿಯರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕೃಷಿಕರು ಉಪ ಕಸುಬುಗಳಾದ ಕುರಿ ಸಾಕಾಣಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಪೋಷಣೆ ಕೈ ತೋಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕೃಷಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಕೃಷಿ ಸಖಿಯರು ಆರು ದಿನಗಳ ತರಬೇತಿಯಲ್ಲಿ ಕಲಿಯುವ ವಿಷಯಗಳನ್ನು ಗ್ರಾಮ ಮಟ್ಟದಲ್ಲಿ ರೈತರಿಗೆ ತಿಳಿಸಬೇಕು. ಹೊಸ ತಂತ್ರಗಳ ಮಾಹಿತಿ ಪಡೆದು ರೈತರಿಗೆ ವಿವರಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧಿಕಾರಿ ಶ್ರೀನಾಥ್ ಮಾತನಾಡಿ, ‘ಗ್ರಾಮೀಣ ಭಾಗದ ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಪಡೆದು ರೈತರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ರೈತ ಸಂಪರ್ಕ ಕೇಂದ್ರ, ಬೀಜ ಹಾಗೂ ಕೃಷಿ ಪರಿಕರ ಪಡೆದುಕೊಳ್ಳುವ ಮಾಹಿತಿಯನ್ನು ರೈತರಿಗೆ ನೀಡಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ ಮಾತನಾಡಿ ಸಂಜೀವಿನಿ ಯೋಜನೆ ಅಡಿ ಗ್ರಾಮೀಣ ರೈತ ಮಹಿಳೆಯರ ಪಾಲ್ಗೊಳ್ಳುವಿಕೆ. ಮಹಿಳಾ ಸಬಲೀಕರಣ ಮತ್ತು ಮಹಿಳಾ ಕಿಸಾನ್ ವಿಷಯಗಳ ಕುರಿತು ಕೃಷಿ ಸಖಿಯರಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಸ್.ಬಿ.ಗೌಡಪ್ಪ ಮಾತನಾಡಿ, ‘ಆಧುನಿಕ ಆಹಾರ ಪದ್ಧತಿಯಿಂದ ಇಂದಿನ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅಪೌಷ್ಟಿಕ ಹಾಗೂ ಕಲುಷಿತ ಆಹಾರವೇ ಇದಕ್ಕೆ ಮೂಲ ಕಾರಣವಾಗಿದೆ’ ಎಂದು ತಿಳಿಸಿದರು.
‘ಗುಣಮಟ್ಟ ಅಹಾರೋತ್ಪಾದನೆಯಲ್ಲಿ ಮಣ್ಣಿನ ಅರೋಗ್ಯ ಅತಿ ಮುಖ್ಯ. ಆದ್ದರಿಂದ ಮಣ್ಣಿನ ಅರೋಗ್ಯ ಸುಧಾರಣೆಗೆ ಜೈವಿಕ ಗೊಬ್ಬರ ಮುಖ್ಯವಾಗಿದೆ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಬೇಕು’ ಎಂದು ಸಲಹೆ ನೀಡಿದರು.
‘ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಪಡೆಯಬಹುದಾದ ಬೆಳೆಗಳು. ಬೆಳೆಗಳ ಮೌಲ್ಯವರ್ಧನೆಗಳ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು ರೈತರಿಗೆ ಮನವರಿಕೆ ಮಾಡುವ ಕೆಲಸವನ್ನು ಕೃಷಿ ಸಖಿಯರು ಮಾಡಬೇಕು’ ಎಂದು ಹೇಳಿದರು.
ವಿಸ್ತರಣಾ ನಿರ್ದೇಶನಾಲಯದ ತಾಂತ್ರಿಕ ಸಹಾಯಕ ಹನುಮಂತ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜ್ಞಾನಿಗಳಾದ ಹೇಮಲತಾ ಕೆ.ಜೆ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹನುಮಂತಪ್ಪ ಶ್ರೀಹರಿ ಸ್ವಾಗತಿಸಿದರು. ಶ್ರೀವಾಣಿ ಜಿ.ಎನ್. ನಿರೂಪಿಸಿದರು. ಶ್ರೀಕಾಂತ ವಂದಿಸಿದರು.
ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಜಿಲ್ಲಾ ಪಂಚಾಯಿತಿ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.