ADVERTISEMENT

ಹೊಸ ವಿಷಯದ ಆಳ ಅಧ್ಯಯನದಿಂದ ಆತ್ಮವಿಶ್ವಾಸ: ಡಾ.ವಿ.ಆರ್‌.ಕೆರಸೂರ

ಸ್ನಾತಕೋತ್ತರ ವಿದ್ಯಾರ್ಥಿಗಳ ರಾಷ್ಟ್ರೀಯ ಸಂಶೋಧನಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 12:52 IST
Last Updated 13 ಸೆಪ್ಟೆಂಬರ್ 2022, 12:52 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನವನ್ನು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್‌ ಡಾ.ವಿ.ಆರ್‌.ಕೆರಸೂರ ಉದ್ಘಾಟಿಸಿದರು. 
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನವನ್ನು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್‌ ಡಾ.ವಿ.ಆರ್‌.ಕೆರಸೂರ ಉದ್ಘಾಟಿಸಿದರು.    

ರಾಯಚೂರು: ಸಂಶೋಧನಾ ವಿದ್ಯಾರ್ಥಿಗಳು ಹೊಸ ವಿಷಯದ ಕುರಿತು ಆಳವಾದ ಅಧ್ಯಯನ ಮಾಡುವುದರಿಂದ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವುದಕ್ಕೆ ಸಹಕಾರಿ ಆಗುತ್ತದೆ ಎಂದು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್‌ ಡಾ.ವಿ.ಆರ್‌.ಕೆರಸೂರ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಸಂಶೋಧನಾ ಪ್ರಬಂಧಗಳ ಮರುಮುದ್ರಿಸುವುದು ಮತ್ತು ನಕಲು ಮಾಡಬಾರದು. ಸಂಶೋಧನೆಯಲ್ಲಿ ಒಂದು ಶಿಸ್ತು ಕಾಯ್ದುಕೊಳ್ಳಬೇಕಾಗುತ್ತದೆ. ಸಂಶೋಧನಾ ಪ್ರಬಂಧವನ್ನು ಉತ್ತಮ ರೀತಿಯಲ್ಲಿ ಮಂಡಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಮಾತ್ರ ಮನ್ನಣೆ ದೊರಕುತ್ತದೆ ಎಂದು ತಿಳಿಸಿದರು.

ADVERTISEMENT

ಸಂಶೋಧನಾ ಪ್ರಬಂಧ ವಿಷಯದ ಕುರಿತು ಸಂಶಯ ವ್ಯಕ್ತಪಡಿಸುವವರಿಗೆ ಸೂಕ್ತವಾದ ಉತ್ತರವನ್ನು ನೀಡುವ ಕೌಶಲ ಸಂಶೋಧನಾ ವಿದ್ಯಾರ್ಥಿಯಲ್ಲಿ ಇರಬೇಕು. ಆಳವಾದ ಅಧ್ಯಯನ ಮಾಡಿಕೊಂಡಿದ್ದರೆ ಮಾತ್ರ ಇವೆಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮ್ಮೇಳನಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ಹೊಸ ಅವಕಾಶವಿದ್ದಂತೆ, ಇಂಥ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಪ್ರಸ್ತುತ ಅಂತರ್ಜಾಲದಲ್ಲಿಯೇ ಎಲ್ಲ ಮಾಹಿತಿಯು ಲಭ್ಯವಾಗುತ್ತಿದೆ. ಆದರೆ, ವಿಷಯವನ್ನು ಸಂಶೋಧನಾ ಪ್ರಬಂಧದ ಮೂಲಕ ಮಂಡಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಂಶೋಧನೆ ಎನ್ನುವುದು ಒಂದು ಸವಾಲಾಗಿದೆ ಎಂದು ತಿಳಿಸಿದರು.

ಗುಣಮಟ್ಟದಿಂದ ಕೂಡಿದ ಸಂಶೋಧನೆಗಳು ವಿದ್ಯಾರ್ಥಿಗಳ ಜೀವನದ ದಿಕ್ಕು ಬದಲಿಸುತ್ತವೆ. ಎಸಿಎಆರ್‌ನಂತಹ ಕೃಷಿ ಸಂಸ್ಥೆಗಳು ಸಂಶೋಧನಾ ಪ್ರಬಂಧಗಳನ್ನು ಮೌಲೀಕರಣ ಮಾಡಿ, ಗುಣಮಟ್ಟಕ್ಕೆ ಮಾತ್ರ ಒತ್ತು ಕೊಡುತ್ತವೆ. ಶಿಸ್ತು ಮತ್ತು ವಿಷಯದ ಗ್ರಹಿಕೆಯನ್ನು ಆಧರಿಸಿ ಗುರಿ ಸಾಧಿಸಬಹುದು ಎಂದು ಹೇಳಿದರು.

ಸ್ನಾತಕೋತ್ತರ ವಿಭಾಗದ ಡೀನ್‌ ಡಾ.ಗುರುರಾಜ ಸುಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ಕುಲಸಚಿವ ಡಾ.ಎಂ.ವೀರನಗೌಡ, ವ್ಯವಸ್ಥಾಪನ ಮಂಡಳಿ ಸದಸ್ಯರಾದ ಕೊಟ್ರೇಶಪ್ಪ ಕೋರಿ, ಸುನೀಲಕುಮಾರ್ ವರ್ಮಾ, ಕೃಷಿ ವಿಜ್ಞಾನಿಗಳಾದ ಡಾ.ಎಂ.ಜಿ.ಪಾಟೀಲ, ಡಾ.ಎಸ್‌.ಕೆ.ಮೇಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.