
ರಾಯಚೂರು: ‘ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯ ರೈತರಿಗೆ ಹೊಸ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಿಸಿದ ಕೃಷಿ ತಂತ್ರಜ್ಞಾನ ಸಂಗ್ರಹಾಲಯ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ, ಸಾವಯವ ಪೌಷ್ಠಿಕ ತರಕಾರಿ ಮತ್ತು ಔಷಧಿ ಸಸ್ಯಗಳ ಕೈತೋಟ, ಜಿಲ್ಲೆಯ ಸಾಧಕ ರೈತರ ಮತ್ತು ರೈತ ಮಹಿಳೆಯರ ಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಸಾವಯವ ಕೃಷಿ, ನೀರು ಮತ್ತು ಮಣ್ಣಿನ ಸಂರಕ್ಷಣೆ, ಮಣ್ಣಿನ ಆರೋಗ್ಯ ಕಾಪಾಡುವುದು, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಡ್ರೋನ್ ಪ್ರಾತ್ಯಕ್ಷಿಕೆ ಸಮಗ್ರ ಕೀಟ ನಿರ್ವಹಣೆ, ಬೆಳೆಯ ಮೌಲ್ಯವರ್ಧನೆ ಕುರಿತು ಪ್ರಾತ್ಯಕ್ಷಿಕೆ, ಮಾರುಕಟ್ಟೆಯ ಮಾಹಿತಿ ಮತ್ತು ಕೃಷಿ ಸಲಹೆಗಳನ್ನು ಕಾಲ ಕಾಲಕ್ಕೆ ತಕ್ಕಂತೆ ರೈತರಿಗೆ ಮುಟ್ಟಿಸುತ್ತದೆ’ ಎಂದು ತಿಳಿಸಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ. ಆರ್. ಕುರುಬರ ಮಾತನಾಡಿ, ‘ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕ ರೈತರನ್ನು ಗುರುತಿಸಿ ಪ್ರತಿ ತಿಂಗಳು ‘ನಮ್ಮ ಹೆಮ್ಮೆಯ ರೈತರು, ರೈತ ಮಹಿಳೆಯರು’ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿರುವುದು ಒಳ್ಳೆಯ ಸಂಗತಿ’ ಎಂದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕ ಪ್ರಕಾಶ ಚವ್ಹಾಣ್ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ನಾಯಕ ಅವರು ಸಲಹಾ ಸಮಿತಿಯ ಕಾರ್ಯಸೂಚನೆಗಳ ಅನುಷ್ಠಾನ ವರದಿ ಮಂಡಿಸಿದರು.
ವಿಜ್ಞಾನಿ ಬಿ.ಟಿ. ರಾಯಡು, ಬಿ ಕೃಷ್ಣರಾವ್ ಅವರು ಆನ್ ಲೈನ್ ಮೂಲಕ ಭಾಗವಹಿಸಿ ಕೃಷಿ ವಿಜ್ಞಾನ ಕೇಂದ್ರದ ರೈತ ಸ್ನೇಹಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೀಜ ಘಟಕದ ವಿಶೇಷ ಅಧಿಕಾರಿ ಅರುಣಕುಮಾರ ಹೊಸಮನಿ, ನಬಾರ್ಡ್ ಡಿ.ಡಿ.ಎಂ. ಕಲಾವತಿ,
ಪಶು ಇಲಾಖೆ ಉಪ ನಿರ್ದೇಶಕ ಡಾ.ಪೋಮ್ ಸಿಂಗ್, ಕೆಎಂಎಫ್ ಅಧಿಕಾರಿ ಸತ್ಯನಾರಾಯಣ, ಕೆಎಸ್‍ಎಸ್‍ಸಿ ಯ ಪ್ರಭು ತುರಾಯಿ, ಮೀನುಗಾರಿಕೆ ವಿಜ್ಞಾನಿ ಡಾ. ಸುಧಾಕರ ಎ, ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಮಿರಾಡದ ಅಧಿಕಾರಿ ಸಂಗಮೇಶ ಕಂಬಾರ, ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯ ಮೋಹನ ನಾಯಕ, ಪ್ರಗತಿಪರ ರೈತರಾದ ಸುರೇಶ ಗೌಡ, ಮಲ್ಲಿಕಾರ್ಜುನ ಕಲ್ಮಂಗಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶೀವಾಣಿ, ಜಿ.ಎನ್, ವೀಣಾ ಹಾಗೂ ಮಲ್ಲರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.