ADVERTISEMENT

ರಾಯಚೂರು| ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 7:38 IST
Last Updated 23 ನವೆಂಬರ್ 2025, 7:38 IST
ರಾಯಚೂರು ನಗರದಲ್ಲಿ ಶನಿವಾರ ನಡೆದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು ಉದ್ಘಾಟಿಸಿದರು
ರಾಯಚೂರು ನಗರದಲ್ಲಿ ಶನಿವಾರ ನಡೆದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು ಉದ್ಘಾಟಿಸಿದರು   

ರಾಯಚೂರು: ‘ವಿದ್ಯಾರ್ಥಿಗಳು ಸವಾಲುಗಳು ಹಾಗೂ ಅವುಗಳಿಂದ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಗುರಿ ಸಾಧಿಸಬೇಕು’ ಎಂದು ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು ಸಲಹೆ ನೀಡಿದರು.

ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜೀವನದಲ್ಲಿ ತೊಂದರೆಗಳು ಸಹಜ. ಆದರೆ, ಅವುಗಳಿಗೆ ಪರಿಹಾರ ಹುಡುಕುವುದು ಅಸಾಧ್ಯವೇನಲ್ಲ. ಇದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಂಡು ಸಮರ್ಪಣಾ ಮನೋಭಾವ, ಶಿಸ್ತು ಹಾಗೂ ಭಕ್ತಿಪೂರ್ವಕ ಮನಸ್ಸಿನಿಂದ ಶ್ರಮಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದರು.

ADVERTISEMENT

‘ಈ ಭೂಮಿ ಮೇಲೆ ಮಾನವನ ವಸಾಹತು ಇರುವವರೆಗೂ ಕೃಷಿ ಕ್ಷೇತ್ರವು ಇದ್ದೇ ಇರುತ್ತದೆ. ಹೀಗಾಗಿ ಕೃಷಿ ಮತ್ತು ಕೃಷಿ ತಾಂತ್ರಿಕ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು. ಈ ಕೃಷಿ ಕ್ಷೇತ್ರ ಮತ್ತು ಸಮಾಜ ಅವುಗಳ ಬೆಳವಣಿಗೆಗೆ ನಿಮ್ಮ ಕೊಡುಗೆಯನ್ನು ಬಯಸುತ್ತಿವೆ. ಆದ್ದರಿಂದ ಕೃಷಿ ಜ್ಞಾನ, ಕೃಷಿ ಕೌಶಲ ಹಾಗೂ ಸೇವಾ ಮನೋಭಾವ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಎಂ.ಹನುಮಂತಪ್ಪ ಮಾತನಾಡಿ,‘ಈ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ದೇಶ ಹಾಗೂ ರಾಜ್ಯದ ಅನೇಕ ಸಂಸ್ಥೆ ಹಾಗೂ ಸರ್ಕಾರಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು, ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.

‘ರೈತರ ವಿಶ್ವವಿದ್ಯಾಲಯವಾದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ರೈತರ ಏಳಿಗೆಗೆ ಇದುವರೆಗೆ 55 ಹೊಸ ತಳಿಗಳು, 500 ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ವಿಶ್ವವಿದ್ಯಾಲಯವು ಆವಿಷ್ಕರಿಸಿದ ಇ-ಸ್ಯಾಪ್ ತಂತ್ರಜ್ಞಾನ ಕರ್ನಾಟಕ ರಾಜ್ಯ ಹಾಗೂ ಇತರೆ ರಾಜ್ಯಗಳಿಗೆ ಪಸರಿಸಿರುವುದು ಹೆಮ್ಮೆಯ ಸಂಗತಿ. ಜೊತೆಗೆ ಈ ವರ್ಷದಲ್ಲಿ ವಿಶ್ವವಿದ್ಯಾಲಯ ಸಂಶೋಧಿಸಿದ 4 ತಂತ್ರಜ್ಞಾಗಳಿಗೆ ಪೇಟೆಂಟ್ ದೊರೆತಿದೆ’ ಎಂದು ತಿಳಿಸಿದರು.

‘ನಮ್ಮ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಶಿಕ್ಷಕರು ಇನ್ನೂ ಹೆಚ್ಚಿನ ಪರಿಶ್ರಮವಹಿಸಿ ಅನೇಕ ರೈತಸ್ನೇಹಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದರು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಡಿ. ಮಾತನಾಡಿ, ‘ವಿಶ್ವವಿದ್ಯಾಲಯದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಅವುಗಳಲ್ಲಿ ಶೇ 20ರಷ್ಟು ಮಾತ್ರ ರೈತರಿಗೆ ತಲುಪುತ್ತಿವೆ. ಆದ್ದರಿಂದ ವಿಶ್ವವಿದ್ಯಾಲಯವು ರೈತರಲ್ಲಿನ ತಂತ್ರಜ್ಞಾನ ಅಳವಡಿಕೆಯ ಕುರಿತು ಅಧ್ಯಯನವನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಸ್ಕಿ ತಾಲ್ಲೂಕಿನ ಗುಡಿಹಾಳ ಗ್ರಾಮದ ಶಿವಕುಮಾರ ಪಾಟೀಲ ಅವರು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿ ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಪ್ರಾಯೋಜಿತ ‘2025ರ ಕೃಷಿರತ್ನ’ ಪ್ರಶಸ್ತಿ ಹಾಗೂ ಚಿನ್ನದ ಪದಕ ಬಹುಮಾನ ನೀಡಿ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಅತ್ಯುತ್ತಮ ಶಿಕ್ಷಕ, ಸಂಶೋಧನಾ ವಿಜ್ಞಾನಿ, ವಿಸ್ತರಣಾ ವಿಜ್ಞಾನಿ, ಕ್ಷೇತ್ರ ಅಧೀಕ್ಷಕ, ಸೇವಾ ಸಿಬ್ಬಂದಿ, ಕ್ಷೇತ್ರ ಸಹಾಯಕ ಹಾಗೂ ಅತ್ಯುತ್ತಮ ಕೃಷಿ ಕಾರ್ಮಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಬಿ.ವಿ.ಪಾಟೀಲ, ನಿವೃತ್ತ ಡೀನ್ ಸಿ.ವಿ.ಪಾಟೀಲ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಮಲ್ಲೇಶ ಕೊಲಿಮಿ, ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.