
ಮುದಗಲ್ ಪಟ್ಟಣದ ಖದೀಜಾ ಫಂಕ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಎಂಐಎಂ ರಾಜ್ಯ ಘಟದ ಅಧ್ಯಕ್ಷ ಲತೀಫ್ ಖಾನ್ ಪಠಾಣ ಮಾತನಾಡಿದರು
ಮುದಗಲ್: ‘ಕಾಂಗ್ರೆಸ್ ಮುಸ್ಲಿಮರನ್ನು ರಾಜಕೀಯಾಗಿ ಬಳಕೆ ಮಾಡಿಕೊಳ್ಳುತ್ತಿದೆಯೇ ವಿನಃ ಸಮಾಜದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ’ ಎಂದು ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಲತೀಫ್ ಖಾನ್ ಪಠಾಣ ಹೇಳಿದರು.
ಪಟ್ಟಣದ ಮಸ್ಕಿ ರಸ್ತೆಯಲ್ಲಿರುವ ಖದೀಜಾ ಫಂಕ್ಷನ್ ಹಾಲ್‌ನಲ್ಲಿ ನಡೆದ ಎಐಎಂಐಎಂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮಾಜದ ಪರವಾಗಿ ನಿಲ್ಲುತ್ತಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದೆ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ನಾವು ಈಗ ಎಐಎಂಐಎಂ ಬೆಂಬಲಿಸುವ ಸಮಯ ಬಂದಿದೆ. ಹೋಬಳಿ ಮಟ್ಟದಲ್ಲಿ ಎಐಎಂಐಎಂ ಪಕ್ಷ ಬೆಳೆಸುವ ಯೋಜನೆ ಇದೆ. ಇದಕ್ಕಾಗಿ ಮುದಗಲ್ ಹೋಬಳಿಗೆ ಪಕ್ಷದ ನೂತನ ಅಧ್ಯಕ್ಷರನ್ನಾಗಿ ಅಬೇದ್ ಬೆಳ್ಳಿಕಟ್ ಅವರನ್ನು ನೇಮಿಸಿದ್ದೇವೆ. ನಮ್ಮ ಸಮಾಜದವರು ಗುಲಾಮಗಿರಿ ಸಂಸ್ಕೃತಿ ಬಿಡಬೇಕು. ಸ್ವತಂತ್ರ ನಿರ್ಣಯ ತೆಗೆದುಕೊಳ್ಳಬೇಕು’ ಎಂದರು.
‘ಅಸಾದುದ್ದೀನ್ ಓವೈಸಿ ಅವರಿಗೆ ಸಮಾಜದ ಬಗ್ಗೆ ಕಾಳಜಿ ಇದೆ. ರಾಜ್ಯ ಸರ್ಕಾರ ನೀಡುವ ಬಿಟ್ಟಿ ಭಾಗ್ಯಗಳಿಂದ ಯುವಕರ ಭವಿಷ್ಯ ಹಾಳಾಗಿದೆ. ಮುಂಬರುವ ಮುದಗಲ್ ಪುರಸಭೆ ಚುನಾವಣೆಯಲ್ಲಿ 23 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮೂಲಕ ನಾವೂ ರಾಜಕೀಯವಾಗಿ ಮುಂದೆ ಬರೋಣ’ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಶಬ್ಬೀರ್ ಅಹ್ಮದ್ ಬೆಳಗಾವಿ, ಯುವ ಘಟಕದ ಅಧ್ಯಕ್ಷ ಶಾರೂಕ್ ಪಟೇಲ್, ಮಹ್ಮದ್ ರಫಿ ಖುರೇಷಿ, ಯುವ ಘಟಕದ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್, ಮುದಗಲ್ ಘಟಕದ ಅಧ್ಯಕ್ಷ ಅಬೇದ್ ಬೆಳ್ಳಿಕಟ್ ಮಾತನಾಡಿದರು.
ಮೌಲಾನಾ ಹಾಸೀಂ, ಮೌಲಾನಾ ಅಜ್ಮತುಲ್ಲಾ ಖಾದ್ರಿ, ರೋಷನ್ ಜಹಾ, ನೂರು, ಶೇಖ್ ಚಾಂದ್ ಕಡ್ಡಿಪುಡಿ, ಮಹ್ಮದ್ ಎಂಟುಬಂಡಿ ಹಾಗೂ ಶಾರೂಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.