
ರಾಯಚೂರು: ಸಿಂಧನೂರು ತಾಲ್ಲೂಕಿನ ಸೋಮಲಾಪುರ ಸಮೀಪದ ಧಾರ್ಮಿಕ ಕ್ಷೇತ್ರ ಅಂಬಾಮಠದ ಅಂಬಾದೇವಿ ಜಾತ್ರಾಮಹೋತ್ಸವಕ್ಕೆ ಚಾಲನೆ ದೊರೆತಿದೆ. ಏಳು ದಿನಗಳ ವರೆಗೆ ನಡೆಯಲಿರುವ ಜಾತ್ರೆಗೆ ಭಕ್ತ ಸಾಗರ ಹರಿದು ಬರುತ್ತಿದೆ. ಈ ನಡುವೆಯೇ ನಾಲ್ಕು ರಾಜ್ಯಗಳ ಸಾಧುಗಳು ಇಲ್ಲಿಗೆ ಬಂದಿದ್ದು, ‘ಗಾಂಜಾ ಜಾತ್ರೆ’ ಹೆಸರಲ್ಲಿ ಜಾತ್ರೆ ರಂಗೇರಿದೆ.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲ ಜಿಲ್ಲೆಗಳ ಸಾಧುಗಳು ಇಲ್ಲಿಗೆ ಬಂದಿದ್ದಾರೆ. ಟ್ರ್ಯಾಕ್ಟರ್, ಕ್ರೂಸರ್, ಬಸ್‌ಗಳಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದು ದೇಗುಲದ ಪರಿಸರದಲ್ಲಿ ಬೀಡು ಬಿಟ್ಟಿದ್ದಾರೆ. ಸಾಧುಗಳು ಬೆಟ್ಟದ ಇಳಿಜಾರಿನಲ್ಲಿ ಕಲ್ಲುಬಂಡೆಗಳ ಮಧ್ಯೆ ಆಶ್ರಯ ಪಡೆದು ಗಾಂಜಾ ಸೇದಿ ವಿಭಿನ್ನ ರೀತಿಯಲ್ಲಿ ಸಂಭ್ರಮಾಚಾರಣೆ ಮಾಡುತ್ತಿದ್ದಾರೆ.
ದೇವಸ್ಥಾನದ ಒಳಗಡೆ ಗಾಂಜಾ ಹಾಗೂ ಮಾಂಸಾಹಾರದಂತ ನೈವೇದ್ಯ ಸಮರ್ಪಣೆಗೆ ಅವಕಾಶ ಇಲ್ಲ. ಆದರೆ, ಸಾಧುಗಳು ಹಾಗೂ ಭಕ್ತರು ಅಲ್ಲಲ್ಲಿ ಬಿಡಾರ ಹಾಕಿ ದೇವರ ಹೆಸರಿನಲ್ಲಿ ಗಾಂಜಾ ಸೇವಿಸುತ್ತಿದ್ದಾರೆ. ಬಿಡಾರಗಳಲ್ಲಿ ದೇವಿಯ ಪ್ರತಿಕೃತಿ ರೂಪಿಸಿ ತೆರೆಮರೆಯಲ್ಲಿ ಟಗರು, ಹೋತ ಹಾಗೂ ಹುಂಜಗಳ ಬಲಿಕೊಟ್ಟು ಬಾಡೂಟ ಸಿದ್ಧಪಡಿಸಿ ನೈವೇದ್ಯ ಸಮರ್ಪಿಸುತ್ತಿದ್ದಾರೆ.
ಭಕ್ತಾದಿಗಳ ಸಮ್ಮುಖದಲ್ಲೇ ಸಾಧುಗಳು ಗಾಂಜಾ ಸೇದುತ್ತಿದ್ದಾರೆ. ಕೆಲ ಭಕ್ತರು ಅವರ ಬಳಿಗೆ ಹೋಗಿ ತಮ್ಮ ಭವಿಷ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಆಶೀರ್ವಾದ ಪಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆದಿದೆ.
ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಸೇವನೆ ತಡೆಯಲು ಪೊಲೀಸರು ಒಂದು ಪೊಲೀಸ್ ಚೌಕಿಯನ್ನೂ ಸ್ಥಾಪಿಸಿದ್ದಾರೆ. ಸಿಂಧನೂರು ತಾಲೂಕಿನಲ್ಲಿ ಈಚೆಗೆ 37 ಗಾಂಜಾ ಪ್ರಕರಣಗಳು ಸಹ ದಾಖಲಾಗಿವೆ. ಆದರೆ, ಜಾತ್ರೆಯಲ್ಲಿ ಗಾಂಜಾ ಮಾರಾಟ ಮಾಡುವವರನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಸಿಂಧನೂರು ತಾಲ್ಲೂಕು ಆಡಳಿತವು ಭಕ್ತರಿಗೆ ಎಷ್ಟೇ ಎಚ್ಚರಿಕೆ, ತಿಳಿವಳಿಕೆ ನೀಡಿದರೂ ಗಾಂಜಾ ಸೇವನೆ ನಿಂತಿಲ್ಲ. ಕೆಲ ಭಕ್ತರೇ ಗಾಂಜಾ ತಂದು ಸಾಧುಗಳಿಗೆ ಕೊಟ್ಟು ಅವರನ್ನು ಖುಷಿಪಡಿಸುತ್ತಿದ್ದಾರೆ. ಪ್ರಾಣಿಪ್ರಿಯರು ಪ್ರಾಣಿಬಲಿ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರೂ ಬಲಿ ತಡೆಯಲು ಸಹ ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವದ ವೇಳೆ ಭಕ್ತರು ಪ್ರಾಣಿ ವಧೆಯ ಎಲ್ಲ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿ ಮಧ್ಯಾಹ್ನ ಮಾಂಸದೂಟಕ್ಕೆ ಸಿದ್ಧವಾಗುತ್ತಿದ್ದಾರೆ.
‘ಸಾರ್ವಜನಿಕರ ಹಿತದ ದೃಷ್ಟಿಯಿಂದ ರಾಜಕೀಯ ವ್ಯಕ್ತಿಗಳು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಜಾತ್ರೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕಿದೆ. ಹೀಗಾಗಿ ಪೊಲೀಸರಿಗೆ ಪೂರ್ಣ ಅಧಿಕಾರ ಕೊಡಲಾಗಿದೆ. ಜಾತ್ರೆ ಹೆಸರಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ನಿಲ್ಲಬೇಕು ಎನ್ನುವುದು ನಮ್ಮಯ ಆಶಯ ಕೂಡ ಆಗಿದೆ‘ ಎಂದು ಸಿಂಧನೂರು ಶಾಸಕ ಬಸನಗೌಡ ಬಾದರ್ಲಿ ಹೇಳುತ್ತಾರೆ.
‘ಸಿಂಧನೂರು ತಾಲ್ಲೂಕಿನ ಅಂಬಾಮಠದ ಪರಿಸರದಲ್ಲಿ ಮೊದಲು ಪ್ರಾಣಿ ಹತ್ಯೆಯನ್ನು ಸಂಪೂರ್ಣ ನಿರ್ಬಂಧಿಸಬೇಕು. ಮಾದಕ ವಸ್ತುಗಳ ಸೇವೆ ಹಾಗೂ ಮಾರಾಟಕ್ಕೂ ಕಡಿವಾಣ ಹಾಕಬೇಕು‘ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸುತ್ತಾರೆ.
ದೇಗುಲದ ಪರಿಸರದಲ್ಲಿ ಸಹಸ್ರಾರು ಭಕ್ತರು ಬಿಡಾರಗಳಲ್ಲಿ ಮದ್ಯ ಸೇವಿಸಿ ಯುವಕರ ಮೋಜು | ನಾಲ್ಕು ರಾಜ್ಯಗಳ ಭಕ್ತರ ಸಮಾಗಮ
ಕೈಕೊಟ್ಟಿರುವ ನೆಟವರ್ಕ್: ನಷ್ಟದಲ್ಲಿ ವ್ಯಾಪರಸ್ಥರು
ಅಂಬಾಮಠದ ಆವರಣದಲ್ಲಿ ಮೂರು ದಿನಗಳಿಂದ ನೆಟವರ್ಕ್ ಸಮಸ್ಯೆ ಇದೆ. ಪ್ರತಿ ವರ್ಷ ಇಲ್ಲಿ ಲಕ್ಷಾಂತರ ಭಕ್ತರು ಹೋಗುತ್ತಿದ್ದರೂ ಜಿಲ್ಲಾಡಳಿತ ಮೊಬೈಲ್ ನೆಟವರ್ಕ್‌ಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ದೂರ ಸಂಪರ್ಕ ಇಲಾಖೆಯೂ ಈ ವಿಷಯಲ್ಲಿ ವಿಫಲವಾಗಿದೆ. ಅಂಬಾಮಠ ಸಿಂಧನೂರಿನಿಂದ 24 ಕಿ.ಮೀ ಅಂತರದಲ್ಲಿಇದೆ. ಸಿಂಧನೂರು ದಾಟಿದರೆ ಸಾಕು ನೆಟವರ್ಕ್ ಕಡಿತಗೊಳ್ಳುತ್ತಿದೆ. ಜಾತ್ರೆಯಲ್ಲಿ ತಿಂಡಿತಿನಿಸು ಆಟಿಕೆ ಸಾಮಾನು ಗೃಹೋಪಯೋಗಿ ವಸ್ತುಗಳ ಮಾರಾಟಗಾರರು ಅಂಗಡಿಗಳಲ್ಲಿ ಕ್ಯೂರ್‌ಕೋಡ್ ಇಟ್ಟುಕೊಂಡರೂ ಪ್ರಯೋಜವಾಗಿಲ್ಲ. ಚಹಾ ಅಂಗಡಿ ಕಬ್ಬಿನ ಹಾಲು ಹಾಗೂ ಉಪಾಹಾರದ ಅಂಗಡಿಯಲ್ಲಿ ಉಪಾಹಾರ ಸೇವಿಸಿದ ನಂತರ ಭಕ್ತರಿಗೆ ಫೋನ್‌ಪೇ ಮಾಡಲು ಸಾಧ್ಯವಾಗುತ್ತಿಲ್ಲ. ಉಪಾಹಾರ ಚಹಾ ಸೇವಿಸಿದವರು ಆಮೇಲೆ ಬಂದು ಹಣ ಕೊಡುವುದಾಗಿ ಹೇಳಿ ಹೋದವರು ಮತ್ತೆ ಅಂಗಡಿಯತ್ತ ಬರುತ್ತಿಲ್ಲ. ಹೀಗಾಗಿ ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ‘ಎರಡು ದಿನ ನಷ್ಟ ಅನುಭವಿಸಿದ್ದೇವೆ. ಅಧಿಕಾರಿಗಳ ಸೋಗಿನಲ್ಲಿ ಬಂದವರಿಂದಲೇ ನಮಗೆ ಹೆಚ್ಚು ಮೋಸವಾಗಿದೆ‘ ಎಂದು ಮಿರ್ಜಿ ಭಜ್ಜಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.