ADVERTISEMENT

ಲಿಂಗಸುಗೂರು: ₹1 ಕೋಟಿ ವೆಚ್ಚದ ಅಂಬೇಡ್ಕರ್ ಭವನಕ್ಕಿಲ್ಲ ಉದ್ಘಾಟನಾ ಭಾಗ್ಯ

ಶಾದಿ ಮಹಲ್‌ ಬಳಿ ಸುಸಜ್ಜಿತ ಕಟ್ಟಡ ನಿರ್ಮಾಣ

ಪ್ರಜಾವಾಣಿ ವಿಶೇಷ
Published 5 ಜುಲೈ 2025, 6:14 IST
Last Updated 5 ಜುಲೈ 2025, 6:14 IST
ಲಿಂಗಸುಗೂರು ಪಟ್ಟಣದಲ್ಲಿ ಉದ್ಘಾಟನೆಗೆ ಕಾದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ
ಲಿಂಗಸುಗೂರು ಪಟ್ಟಣದಲ್ಲಿ ಉದ್ಘಾಟನೆಗೆ ಕಾದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ   

ಲಿಂಗಸುಗೂರು: ಪಟ್ಟಣದ ಶಾದಿ ಮಹಲ್ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಿ ಒಂದು ವರ್ಷ ಕಳೆಯುತ್ತಿದ್ದರೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ.

ಲಿಂಗಸುಗೂರು 2008ರಿಂದ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದರೂ ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ಇರಲಿಲ್ಲ. 2013-14ನೇ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹50 ಲಕ್ಷ ಬಿಡುಗಡೆಯಾಗಿತ್ತು. ಆದರೆ, ಡಿ.ಎಸ್.ಹೂಲಗೇರಿ ಶಾಸಕರಾಗಿದ್ದ ವೇಳೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಮತ್ತೆ ₹50 ಲಕ್ಷ ಬಿಡುಗಡೆ ಮಾಡಿಸಿ ಒಟ್ಟು ಒಂದು ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ 2022 ಏಪ್ರಿಲ್ 14ರಂದು ಚಾಲನೆ ನೀಡಲಾಗಿತ್ತು.

ಸಿದ್ಧಗೊಂಡ ಭವನ: ಒಂದು ಕೋಟಿ ವೆಚ್ಚದಲ್ಲಿ ಮೊದಲ ಮಹಡಿಯಲ್ಲಿ ಸಭಾ ಭವನ, ಎರಡು ಕೊಠಡಿ, ನೆಲ ಮಹಡಿಯಲ್ಲಿ ಅಡುಗೆ ಕೋಣೆ, ಊಟದ ಹಾಲ್, ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ADVERTISEMENT

ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಆಗಿಲ್ಲ. ಆದರೂ ಇದೇ ವರ್ಷದ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ದಿನದಂದು ಭವನ ಉದ್ಘಾಟನೆಗೆ ಚಿಂತನೆ ಮಾಡಲಾಗಿತ್ತು. ಆದರೂ ಅದು ಕೈಗೂಡಲಿಲ್ಲ. ಮೇಲಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭವನವನ್ನು ಸಮಾಜ ಕಲ್ಯಾಣಕ್ಕೆ ಹಸ್ತಾಂತರ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ಆಸಕ್ತಿ ತೋರದ ಕಾರಣ ಭವನ ಉದ್ಘಾಟನೆ ನನೆಗುದಿಗೆ ಬಿದ್ದಿದೆ.

ಕಾಂಪೌಂಡ್ ಇಲ್ಲ: ಭವನಕ್ಕೆ ಕಾಂಪೌಂಡ್ ಇಲ್ಲ. ಇದರಿಂದ ಕಿಡಿಗೇಡಿಗಳು ಒಳ ಬಂದು ಹಾಳು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಭವನದ ಸಂರಕ್ಷಣೆಗಾಗಿ ಮೊದಲು ಸೂಕ್ತ ಕಾಂಪೌಂಡ್ ನಿರ್ಮಾಣ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ, ಶಾಸಕರಿಗೆ ಮನವಿ ಮಾಡಲಾಗಿದೆ. ಆದರೆ, ಕಾಂಪೌಂಡ್ ನಿರ್ಮಾಣವಾಗುತ್ತಿಲ್ಲ. ತಾಲ್ಲೂಕು ಆಡಳಿತ ಶೀಘ್ರವೇ ಕಾಂಪೌಂಡ್ ನಿರ್ಮಾಣ ಮಾಡಿ ಭವನ ಉದ್ಘಾಟನೆ ಮಾಡಬೇಕು ಎಂದು ಛಲುವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಲಿಂಗಪ್ಪ ಪರಂಗಿ ಒತ್ತಾಯಿಸುತ್ತಾರೆ.

ಪಿಡಬ್ಲ್ಯೂಡಿಗೆ ಪತ್ರ

ಭವನ ಸುತ್ತಲೂ ಕಾಂಪೌಂಡ್ ಸಭಾಂಗಣದಲ್ಲಿ ಕುರ್ಚಿಗಳು ದ್ವನಿ ವರ್ದಕ ಎಸಿ ಊಟದ ಹಾಲ್ ನಲ್ಲಿ ವಿವಿಧ ಪಿಠೋಪಕರಣ ಸೇರಿ ಇತರೆ ಸಾಮಾಗ್ರಿಗಳಾಗಿ ಅಂದಾಜು ವೆಚ್ಚ ತಯಾರಿಸುವಂತೆ ಲೋಕೋಪಯೋಗಿ ಇಲಾಖೆಗೆ ಕೆಲ ತಿಂಗಳು ಹಿಂದೆ ಪತ್ರ ಬರೆಯಲಾಗಿತ್ತು ಆದರೆ ಅವರು ಅಂದಾಜು ವೆಚ್ಚ ತಯಾರಿಸಿ ನೀಡಿಲ್ಲ ಈಗಾಗಿ ಮತ್ತೊಮ್ಮೆ ಪತ್ರ ಬರೆಯುವೆ. ಆದರೂ ಶಾಸಕರ ದಿನಾಂಕ ಪಡೆದು ಮುಂದಿನ ತಿಂಗಳು ಭವನ ಉದ್ಘಾಟನೆಗೆ ಕ್ರಮವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.