ADVERTISEMENT

ದೇವದುರ್ಗ | ಬಹಿರಂಗ ಚರ್ಚೆಗೆ ಬನ್ನಿ: ಅಧ್ಯಕ್ಷರಿಗೆ ಸವಾಲು

ಎಪಿಎಂಸಿ ನಿವೇಶನಗಳ ಹರಾಜಿನಲ್ಲಿ ಅಕ್ರಮ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 6:38 IST
Last Updated 16 ಜುಲೈ 2025, 6:38 IST
ರಂಗಪ್ಪ ಗೋಸಲ್
ರಂಗಪ್ಪ ಗೋಸಲ್   

ದೇವದುರ್ಗ: ‘ಅರ್ಹತೆ ಇಲ್ಲದ ವರ್ತಕರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಬಹಿರಂಗ ಚರ್ಚೆಗೆ ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ ಬುಂಕಲದೊಡ್ಡಿ ಅವರನ್ನು ಆಹ್ವಾನಿಸುತ್ತೇವೆ. ಅವರೇ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಿ’ ಎಂದು ಎಪಿಎಂಸಿ ಸದಸ್ಯ ರಂಗಪ್ಪ ಗೋಸಲ್ ಸವಾಲು ಹಾಕಿದರು.

ಪಟ್ಟಣದಲ್ಲಿ ಮಂಗಳವಾರ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‌‌‘ಅಕ್ರಮವನ್ನು ದಾಖಲೆ ಸಮೇತ ಸಾಬೀತು ಮಾಡುವೆ. ಎಪಿಎಂಸಿ ಕಾರ್ಯದರ್ಶಿ ರಂಗನಾಥ ಅವರು ತಮ್ಮ ಸಂಬಂಧಿಕರಿಗೆ 1, ಮಾಜಿ ಎಪಿಎಂಸಿ ಅಧ್ಯಕ್ಷ ಕುಟುಂಬ ಸದಸ್ಯರಿಗೆ 5, ಮಾಜಿ ಉಪಾಧ್ಯಕ್ಷರ ಸಂಬಂಧಿಕರಿಗೆ 1, ಎಪಿಎಂಸಿ ಜವಾನನ ಸಂಬಂಧಿಕರಿಗೆ 2 ಮತ್ತು ಅರ್ಜಿ ಸಲ್ಲಿಸಿದ ಕೊನೆ ದಿನಾಂಕದ ಹಿಂದಿನ ದಿನದಂದು ಎಪಿಎಂಸಿ ಲೈಸೆನ್ಸ್ ಪಡೆದು ಅರ್ಜಿ ಸಲ್ಲಿಸಿ ನಿವೇಶನ ಪಡೆದವರ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರುತ್ತೇನೆ’ ಎಂದು ತಿಳಿಸಿದರು.

‘ಎಪಿಎಂಸಿ ನಿಯಮಾವಳಿ ಗಾಳಿಗೆ ತೂರಿ ಅಧ್ಯಕ್ಷ ಆದನಗೌಡ ಮತ್ತು ಕಾರ್ಯದರ್ಶಿ ರಂಗನಾಥ 57 ವರ್ತಕರಿಂದ ತಲಾ ₹1.5 ಲಕ್ಷದಂತೆ ಒಟ್ಟು ₹85 ಲಕ್ಷ ಲಂಚ ಪಡೆದು ಅಕ್ರಮ ನಿವೇಶನಗಳನ್ನು ಪಕ್ಕದ ತಾಲ್ಲೂಕುಗಳಲ್ಲಿ ನೋಂದಣಿ ಮಾಡಿಸಿದ್ದಾರೆ’ ಎಂದರು.

ADVERTISEMENT

ಹಣ ನೀಡುವ ಆಮಿಷ

‘‌‌ಸಾಮಾನ್ಯ ಸಭೆ ಗಮನಕ್ಕೆ ತರದೆ ಕಾಟಚಾರಕ್ಕೆ ಮೌಖಿಕವಾಗಿ ದೂರವಾಣಿ ಮೂಲಕ ಜೂನ್ 12 ಮತ್ತು 18 ರಂದು ಎರಡು ಬಾರಿ ಸಭೆ ಕರೆದು ಎರಡು ಬಾರಿಯೂ ಸಭೆ ಮುಂದೂಡಿದ್ದಾರೆ. 3ನೇ ಬಾರಿ ಜುಲೈ 2ರಂದು ನೋಟಿಸ್ ನೀಡಿ ಅದನ್ನು ಮುಂದೂಡಿ ಜುಲೈ 7 ರಂದು ಸಭೆ ಮಾಡಿದ್ದಾರೆ. ಸಭೆಯಲ್ಲಿ ಈ ಎಲ್ಲಾ ಅಕ್ರಮಗಳು ಮನಗಂಡ ನಾವು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಎಪಿಎಂಸಿಯ ಸದಸ್ಯರೊಬ್ಬರನ್ನು ರಾಯಚೂರಿನಲ್ಲಿ ಭೇಟಿಯಾಗಿ ಒತ್ತಾಯದಿಂದ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಕಾರ್ಯದರ್ಶಿ ರಂಗನಾಥ ಅವರು ನನಗೆ ಕರೆ ಮಾಡಿ ಈ ವಿಚಾರದಲ್ಲಿ ನೀವು ಸುಮ್ಮನಾಗಿ ನಿಮಗೆ ಹಣ ನೀಡುತ್ತವೆ ಎಂದು ಆಮಿಷ ಒಡ್ಡಿದ್ದಾರೆ’ ರಂಗಪ್ಪ ಗೋಸಲ್ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.