ಮಾನ್ವಿ: ಆಂಧ್ರಪ್ರದೇಶ ರಾಜ್ಯ ಸರ್ಕಾರ ತನ್ನ ಗಡಿಭಾಗದಲ್ಲಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಕಾಯಂ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಂಡಿರುವುದು ಅಲ್ಲಿನ ಗಡಿನಾಡು ಕನ್ನಡಿಗರ ಮೆಚ್ಚುಗೆ ಗಳಿಸಿದೆ.
ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಕರ್ನೂಲು ಜಿಲ್ಲೆಯ ಆದೋನಿ, ಕೌತಾಳಂ, ಹಾಲಹರವಿ, ಹೊಳಗುಂದ ಮಂಡಲಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಕನ್ನಡ ಮಾಧ್ಯಮದ ಒಟ್ಟು 26 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 17 ಸರ್ಕಾರಿ ಪ್ರೌಢಶಾಲೆಗಳು ಇವೆ.
ನದಿಚಾಗಿ ಹಾಗೂ ರೌಡೂರು ಗ್ರಾಮಗಳಲ್ಲಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಸ್ಥಾಪನೆಗೊಂಡು 100 ವರ್ಷಗಳನ್ನು ಪೂರೈಸಿ ಶತಮಾನದ ಶಾಲೆಗಳಾಗಿವೆ.
ನದಿಚಾಗಿ ಗ್ರಾಮದಲ್ಲಿರುವ ಒಳಬಳ್ಳಾರಿ ಚನ್ನಬಸವೇಶ್ವರ ಮಠದ ಶಾಖಾ ಮಠವು ಹಲವು ವರ್ಷಗಳಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯದ ವ್ಯವಸ್ಥೆ ಕಲ್ಪಿಸಿ ಪ್ರೋತ್ಸಾಹಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಗಡಿಭಾಗದ 42 ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಸುಮಾರು ಎಂಟು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಕಾಯಂ ಶಿಕ್ಷಕರ ಕೊರತೆಯಿಂದಾಗಿ ತಮ್ಮ ಮಕ್ಕಳ ಪ್ರವೇಶಕ್ಕೆ ಗಡಿನಾಡು ಕನ್ನಡಿಗರು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಕ್ರಮೇಣ ಇಳಿಮುಖಗೊಂಡಿತ್ತು.
ಪ್ರಸಕ್ತ ವರ್ಷ ಅಲ್ಲಿನ ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಒಟ್ಟು ವಿವಿಧ ವಿಷಯಗಳ 58 ಜನ ಶಿಕ್ಷಕರ ಆಯ್ಕೆಗೆ ಪರೀಕ್ಷೆ ನಡೆಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಶಿಕ್ಷಕ ಹುದ್ದೆಗೆ ಆಯ್ಕೆಯಾದ 58 ಅಭ್ಯರ್ಥಿಗಳ ಪೈಕಿ ಕರ್ನಾಟಕ ಮೂಲದ ನಾಲ್ವರು ಇದ್ದಾರೆ.
ಇನ್ನುಳಿದ 54 ಅಭ್ಯರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಆಂಧ್ರಪ್ರದೇಶದ ಗಡಿಭಾಗದ ಗ್ರಾಮಗಳಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮುಗಿಸಿ, ಕರ್ನಾಟಕದ ಬಳ್ಳಾರಿ, ರಾಯಚೂರು ಮತ್ತಿತರ ನಗರಗಳ ಕಾಲೇಜುಗಳಲ್ಲಿ ಪಿಯುಸಿ, ಪದವಿ ಕೋರ್ಸ್‌ಗಳ ವ್ಯಾಸಂಗ ಮಾಡಿದ್ದಾರೆ.
‘ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ನಮ್ಮ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಸಿಗುವ ಭರವಸೆ ಇರಲಿಲ್ಲ. ಈಗ ಗಡಿಭಾಗದ ಗ್ರಾಮಗಳ 54 ಜನ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸರ್ಕಾರಿ ಶಾಲೆಯ ಶಿಕ್ಷಕ ಹುದ್ದೆ ಲಭಿಸಿರುವುದು ಖುಷಿ ತಂದಿದೆ. ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ರಾಜ್ಯ ಸರ್ಕಾರ ಕನ್ನಡ ಮಾಧ್ಯಮ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ’ ಎಂದು ನದಿಚಾಗಿ ಗ್ರಾಮದ ಟಿ.ವಿಜಯಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಆಂಧ್ರ ಗಡಿಯಲ್ಲಿ ಇವೆ 43 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ನದಿಚಾಗಿ, ರೌಡೂರು ಗ್ರಾಮಗಳಲ್ಲಿ ಶತಮಾನ ಪೂರೈಸಿದ ಶಾಲೆಗಳು ಸುಮಾರು 8 ಸಾವಿರ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ
ಕೌತಾಳಂ ಮಂಡಲದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇದ್ದ ಎಲ್ಲ ಶಿಕ್ಷಕ ಹುದ್ದೆಗಳ ಭರ್ತಿಗೆ ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಂಡಿದೆ.ಶೋಭಾರಾಣಿ ಮಂಡಲ ಶಿಕ್ಷಣಾಧಿಕಾರಿ ಕೌತಾಳಂ ಕರ್ನೂಲು ಜಿಲ್ಲೆ
ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಸರ್ಕಾರದ ಹಾಸ್ಟೆಲ್‌ಗಳಲ್ಲಿ ಅವಕಾಶ ವಿದ್ಯಾರ್ಥಿ ವೇತನ ನೀಡಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕುಕುಪ್ಪಲದೊಡ್ಡಿ ಪರಮೇಶ ಅಧ್ಯಕ್ಷ ಗಡಿನಾಡು ಕನ್ನಡ ಯುವಕ ಸಂಘ ಪೆದ್ದ ಹರಿವಾಣಂ ಗ್ರಾಮ ಆದೋನಿ ಮಂಡಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.