ಮಾನ್ವಿ: ಪಟ್ಟಣದ ರಂಗಭೂಮಿ ಯುವ ಕಲಾವಿದ ಅರುಣ್ ನೀನಾಸಂ ತಮ್ಮ ಕಲಾ ಪ್ರತಿಭೆ ಮೂಲಕ ನಾಡಿನಾದ್ಯಂತ ಗಮನ ಸೆಳೆಯುತ್ತಿರುವುದು ಸ್ಥಳೀಯರಲ್ಲಿ ಹೆಮ್ಮೆ ಮೂಡಿಸಿದೆ.
ಫೆ.24ರಂದು ದುಬೈನಲ್ಲಿ ನಡೆಯುತ್ತಿರುವ 48ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಕನ್ನಡ ಸಮ್ಮೇಳನ ಮತ್ತು ಜಾನಪದ ಉತ್ಸವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕಲಾಮೈತ್ರಿ ತಂಡ ಕೆ.ರಾಮಕೃಷ್ಣಯ್ಯ ನಿರ್ದೇಶನದಲ್ಲಿ ಎಚ್.ಎಸ್.ಶಿವಪ್ರಕಾಶ್ ರಚಿಸಿರುವ ‘ಮಂಟೆಸ್ವಾಮಿ ಕಥಾ ಪ್ರಸಂಗ’ ನಾಟಕ 191ನೇ ಪ್ರದರ್ಶನ ನೀಡುತ್ತಿದೆ. ಈ ನಾಟಕದಲ್ಲಿ ಒಟ್ಟು 18 ಜನ ಕಲಾವಿದರಲ್ಲಿ ಅರುಣ್ ನೀಲಗಾರನ ಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.
ಮಾನ್ವಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಜನತಾ ಕಾಲೊನಿಯ ಚಂದ್ರಶೇಖರ ಚೌಡಕಿ ಹಾಗೂ ಯಮನಮ್ಮ ದಂಪತಿ ಪುತ್ರ ಅರುಣ್ ದುಬೈವರೆಗೆ ಕಲಾ ಪ್ರದರ್ಶನ ನೀಡುವ ಮಟ್ಟಿಗೆ ಬೆಳೆದ ಸಾಧನೆ ಅಮೋಘ.
ಆರಂಭದಲ್ಲಿ ಸಹೋದರ ರಾಘವೇಂದ್ರ ಚೌಡಕಿ ಸ್ಥಾಪಿಸಿದ್ದ ‘ಚೌಡಕಿ ಸಾಂಸ್ಕೃತಿಕ ಕಲಾ ತಂಡ’ದ ಬೀದಿ ನಾಟಕಗಳಲ್ಲಿ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದ ಅರುಣ್ ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು.
2005-06ರಲ್ಲಿ ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ಒಂದು ವರ್ಷದ ನಾಟಕ ಡಿಪ್ಲೊಮಾ ಪದವಿ ಪಡೆದರು. ನಂತರ 2008-09ರಲ್ಲಿ ನಾಡಿನ ಹೆಸರಾಂತ ಸಂಸ್ಥೆಯಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ನೀನಾಸಂನಲ್ಲಿ ಒಂದು ವರ್ಷ ನಾಟಕ ಡಿಪ್ಲೊಮಾ ಪದವಿ ಪಡೆದು ಪರಿಪೂರ್ಣ ರಂಗಭೂಮಿ ಕಲಾವಿದರಾಗಿ ಹೊರಹೊಮ್ಮಿದರು.
ನಂತರದ ವರ್ಷಗಳಲ್ಲಿ ನೀನಾಸಂ ತಿರುಗಾಟ, ಮರು ತಿರುಗಾಟ, ಥಿಯೇಟರ್ ಸಮುರಾಯ್, ಧಾರವಾಡದ ಗೊಂಬೆ ಮನೆ, ಶಿವಮೊಗ್ಗದ ಸಮನ್ವಯ ತಂಡ, ವಿಜಯಪುರದ ರಂಗ ಶ್ರೀರಂಗ ತಂಡಗಳಲ್ಲಿ ನಟರಾಗಿ, ನಿರ್ದೇಶಕರಾಗಿ, ತಂತ್ರಜ್ಞನಾಗಿ, ಕಾರ್ಯನಿರ್ವಹಿಸುವ ಮೂಲಕ ರಂಗಭೂಮಿಯಲ್ಲಿ ಯಾವುದೇ ಪಾತ್ರ, ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸುವ ಮಟ್ಟಿಗೆ ಬೆಳೆದಿದ್ದಾರೆ.
ರಂಗಭೂಮಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಪ್ರದರ್ಶನ ಕಲಾ ವಿಭಾಗದದಲ್ಲಿ 2015-16ರಲ್ಲಿ ಎಂ.ಎ ಡ್ರಾಮಾದಲ್ಲಿ 5ನೇ ರ‍್ಯಾಂಕ್ ಪಡೆಯುವ ಮೂಲಕ ಸ್ನಾತಕೋತ್ತರ ಪದವೀಧರರಾಗಿದ್ದಾರೆ.
ಕೆ.ರಾಮಕೃಷ್ಣಯ್ಯ ಅವರು ಕಲಾ ಮೈತ್ರಿ ತಂಡಕ್ಕೆ ನಿರ್ದೇಶಿಸಿದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕದಲ್ಲಿ ನೀಲಗಾರನ ಪಾತ್ರ ಅರುಣ್‌ಗೆ ಹೆಚ್ಚು ಖ್ಯಾತಿ ತಂದಿದೆ. ಈ ನಾಟಕ ರಾಜ್ಯ, ಹೊರ ರಾಜ್ಯಗಳಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ 190 ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡಿದ ಕೀರ್ತಿ ಈ ತಂಡಕ್ಕೆ ಸಲ್ಲುತ್ತದೆ.
ರಾಮನಗರದ ಜಾನಪದ ಲೋಕದಲ್ಲಿ ಒಂದು ವರ್ಷದ ಜಾನಪದ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರಾದ ಕೆ.ರಾಮಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ (ಪಿಎಚ್.ಡಿ ಅಧ್ಯಯನ) ನಾಟಕಗಳ ಕುರಿತು ಸಂಶೋಧನೆ ಕೈಗೊಂಡಿದ್ದಾರೆ.
ಅರುಣ್ ಭವಿಷ್ಯದ ದಿನಗಳಲ್ಲಿ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿ ತರಬೇತಿ ನೀಡಿ ಪ್ರತಿಭಾವಂತ ಕಲಾವಿದರನ್ನು ರೂಪಿಸುವ ಮತ್ತು ರಂಗ ಕಲೆಗಳನ್ನು ಉಳಿಸಿ ಬೆಳೆಸುವ ಮಹಾತ್ವಾಕಾಂಕ್ಷಿ ಹೊಂದಿದ್ದಾರೆ. ಅರುಣ್ ಅವರಂತಹ ಯುವ ಕಲಾವಿದರನ್ನು ಸ್ಥಳೀಯ ಸಂಘ–ಸಂಸ್ಥೆಗಳು ಬೆಂಬಲಿಸಿ ಪ್ರೋತ್ಸಾಹಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.