ರಾಯಚೂರು: ತಾಲ್ಲೂಕಿನ ಆತ್ಕೂರು– ಕುರ್ವಾಪುರ (ಕುರ್ವಕಲ) ಮಧ್ಯೆ ಕೃಷ್ಣಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಕುಂಟುತ್ತ ಸಾಗಿದೆ. ಇದರಿಂದ ಅಗ್ರಹಾರದ ದತ್ತದಿಗಂಬರನ ಭಕ್ತರು ಹಾಗೂ ಕುರ್ವಕಲ ನಡುಗಡ್ಡೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
ನದಿ ಮಧ್ಯದಲ್ಲಿ ಒಟ್ಟು 24 ಕಂಬಗಳನ್ನು ನಿರ್ಮಿಸಲಾಗಿದೆ. ಅದನ್ನು ಬಿಟ್ಟರೆ ಸೇತುವೆ ಕಾಮಗಾರಿ ವೇಗ ಪಡೆದುಕೊಂಡಿಲ್ಲ. ಈ ಕಾಮಗಾರಿಯನ್ನು ರಾಜಕಾರಣಿಗಳ ಸಂಬಂಧಿಗಳೇ ವಹಿಸಿಕೊಂಡಿದ್ದ ಈ ವರ್ಷವೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಇಲ್ಲ. ಚುನಾಯಿತ ಪ್ರತಿನಿಧಿಗಳೂ ಮೇಲ್ವಿಚಾರಣೆಗೆ ಆಸಕ್ತಿ ತೋರಿಸುತ್ತಿಲ್ಲ.
2011ರ ಡಿಸೆಂಬರ್‌ನಲ್ಲಿ 675 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಆರಂಭಿಕ ಯೋಜನಾ ವೆಚ್ಚ ₹14.25 ಕೋಟಿ ಇತ್ತು. 2022ರ ಡಿಸೆಂಬರ್‌ನಲ್ಲಿ ₹24 ಕೋಟಿ ತಲುಪಿದೆ. ಈವರೆ ಒಟ್ಟು ₹38 ಕೋಟಿ ಖರ್ಚು ಮಾಡಿದರೂ ಕಾಮಗಾರಿ ಅರ್ಧದಷ್ಟು ಸಹ ಪೂರ್ಣಗೊಂಡಿಲ್ಲ.
ಶಾಸಕರೊಬ್ಬರ ಸಹೋದರರೇ ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಮೇಲ್ವಿಚಾರಣೆಗೆ ಯಾರೊಬ್ಬರೂ ಧೈರ್ಯ ತೋರಿಸುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ರಾಜಕಾರಣಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಡುವಿನ ಒಳ ಒಪ್ಪಂದದಿಂದಾಗಿ ನಡುಗಡ್ಡೆ ಗ್ರಾಮಗಳ ಜನರ ಸಂಕಷ್ಟ ತಪ್ಪಿಲ್ಲ.
ಅತ್ಕೂರು ಬಳಿ ಕತ್ತಲಾಗುತ್ತಲೇ ಅಕ್ರಮ ಮರಳು ಸಾಗಣೆ ಗರಿ ಬಿಚ್ಚಿಕೊಳ್ಳುತ್ತದೆ. ನದಿಯಲ್ಲೇ ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ಮರಳು ಸಂಗ್ರಹ ಮಾಡಲಾಗಿದೆ. ಗುತ್ತಿಗೆದಾರರು ನದಿ ಒಡಲಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಮಾಡಿದ್ದಾರೆ. ಮರಳು ಅಕ್ರಮ ವ್ಯವಹಾರ ಗಡಿಯಾಚೆಗೂ ನಡೆಯುತ್ತಿದೆ. ಎಲ್ಲರೂ ರಾಜಕಾರಣಿಗಳ ನಿಯಂತ್ರಣದಲ್ಲಿರುವ ಕಾರಣ ಧ್ವನಿ ಎತ್ತುವವರಿಲ್ಲ. ಸೇತುವೆ ನಿರ್ಮಾಣವಾದರೆ ಜನ ಸಂಚಾರ ಹೆಚ್ಚಾಗಿ ಮರಳು ಸಾಗಣೆಗೆ ತೊಡಕಾಗಲಿದೆ ಎನ್ನುವ ಕಾರಣಕ್ಕೂ ಕಾಮಗಾರಿ ಮುಗಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
‘ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ಸಾಗಣೆ ನಡೆದಿರುವುದು ಅಧಿಕಾರಿಗಳಿಗೂ ಗೊತ್ತಿದೆ. ಅಭಿವೃದ್ಧಿಗೆ ಒತ್ತುಕೊಡಬೇಕಾದ ರಾಜಕಾರಣಿಗಳೇ ಅಕ್ರಮ ವ್ಯವಹಾರಕ್ಕೆ ಆದ್ಯತೆ ಕೊಟ್ಟಿದ್ದಾರೆ‘ ಎಂದು ಜನ ಸಂಗ್ರಾಮ ಪರಿಷತ್ತಿನ ಜಿಲ್ಲಾ ಸಮಿತಿ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹೇಳುತ್ತಾರೆ.
‘ವರ್ಷದಲ್ಲಿ ಆರು ತಿಂಗಳು ರಸ್ತೆ ಬಂದ್ ಆಗುತ್ತದೆ. ನಡುಗಡ್ಡೆ ಗ್ರಾಮ ಕುರ್ವಾಪುರ ( ಕುರ್ವಕಲ)ಕ್ಕೆ ದೋಣಿಗಳಲ್ಲೇ ತೆರಳಬೇಕಾಗುತ್ತದೆ. ನದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಮೊಸಳೆಗಳು ಇರುವ ಕಾರಣ ಅಪಾಯ ಕಾದಿರುತ್ತದೆ. ಸೇತುವೆ ಕಾಮಗಾರಿ ಬೇಗ ಪೂರ್ಣಗೊಂಡರೆ ಎಲ್ಲರಿಗೂ ಅನುಕೂಲವಾಗಲಿದೆ’ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಂಗನಾಥ ಪೊಲೀಸ್‌ಪಾಟೀಲ.
‘ನಡುಗಡ್ಡೆಯಲ್ಲಿರುವ ಪವಿತ್ರ ಅಗ್ರಹಾರಕ್ಕೆ ಬೀದರ್, ಕಲಬುರಗಿ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಆದರೆ, ಜಿಲ್ಲಾಡಳಿತ ಆಸಕ್ತಿ ವಹಿಸಿ ಸೇತುವೆ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ‘ ಎಂದು ಅಗ್ರಹಾರಕ್ಕೆ ಬಂದಿದ್ದ ಬೀದರ್‌ನ ವಾಗೀಶ್ ಬೇಸರ ವ್ಯಕ್ತಪಡಿಸಿದರು.
ಸೇತುವೆ ಬಳಿ ಸರಿಯಾದ ರಸ್ತೆಯೂ ಇಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಸಮಸ್ಯೆ ಇದೆ. ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಿಂದ ಹೊರ ಬಂದು ಇಲ್ಲಿಯ ಕಾಮಗಾರಿ ವೀಕ್ಷಿಸಿದರೆ ಸಮಸ್ಯೆಯ ಅರಿವಾಗುತ್ತದೆ. ಆದರೆ, ಅಧಿಕಾರಿಗಳಿಗೂ ಆಸಕ್ತಿ ಇಲ್ಲ. ಇದೇ ಕಾರಣಕ್ಕೆ ರಾಯಚೂರು ಹಿಂದುಳಿಯಲು ಕಾರಣವಾಗಿದೆ ಎಂದು ಆತ್ಕೂರು ಗ್ರಾಮಸ್ಥರು ದೂರಿದರು.
‘ಆತ್ಕೂರಿನಿಂದ ಕುರ್ವಾಪುರಕ್ಕೆ ಹೋಗಲು ಸೇತುವೆ ನಿರ್ಮಿಸಿಲ್ಲ. ರಸ್ತೆಯೂ ಇಲ್ಲ ಹೀಗಾಗಿ ನದಿಯಲ್ಲಿ ಕಚ್ಚಾ ರಸ್ತೆ ನಿರ್ಮಿಸಲಾಗಿದ್ದು, ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು ಮಂದಿರದ ವರೆಗೂ ಬಿಡಲು ಚಾಲಕರು ₹100 ಪಡೆಯುತ್ತಿದ್ದಾರೆ. ನಾವು ಅನಿವಾರ್ಯವಾಗಿ ಪ್ರತಿಯೊಬ್ಬರು ಹಣ ಕೊಟ್ಟು ದತ್ತಮಂದಿರಕ್ಕೆ ಬಂದಿದ್ದೇವೆ ಎಂದು ಶನಿವಾರ ದತ್ತ ಮಂದಿರಕ್ಕೆ ಬಂದಿದ್ದ ತೆಲಂಗಾಣದ ಭಕ್ತರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.