ರಾಯಚೂರು: ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾ ಬಿಟ್ಟಿಯಾಗಿ ಆಟೊ ರಿಕ್ಷಾಗಳನ್ನು ನಿಲುಗಡೆ ಮಾಡದಂತೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ನಿಯಮ ಪಾಲಿಸದ ಕಾರಣ ಪೊಲೀಸರು ಆಟೊ ರಿಕ್ಷಾಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮೊದಲ ದಿನ ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆಗಳನ್ನು ಹೊಂದಿರದ 50 ಆಟೊ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ. ಆನೇಕ ಆಟೊಗಳಿಗೆ ಲೈಸನ್ಸ್, ಇನ್ಸುರೆನ್ಸ್, ಪರ್ಮಿಟ್ ಹೊಂದದೆ ಇರುವುದು, ಸಮವಸ್ತ್ರ ಧರಿಸದೇ ಆಟೊ ಚಾಲನೆ ಮಾಡುವುದು ಕಂಡುಬಂದಿದ್ದು, ಇದನ್ನು ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಪಾರ್ಕಿಂಗ್ ಇಲ್ಲದ ಕಡೆ ಆಟೊಗಳನ್ನು ನಿಲುಗಡೆ ಮಾಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದ ಆಟೊಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಖಲೆ ಹೊಂದಿಲ್ಲದವರಿಗೆ ಆದಷ್ಟು ಬೇಗ ಲೈಸನ್ಸ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸಣ್ಣ ಈರೇಶ ತಿಳಿಸಿದ್ದಾರೆ.
ನಗರದಲ್ಲಿ ಒಂದು ತಿಂಗಳ ಪೂರ್ತಿ ಕಾರ್ಯಾಚರಣೆ ನಡೆಸಲಾಗುವುದು. ಈವರೆಗೂ ವಾಹನ ಚಾಲನಾ ಪರವಾನಗಿ ಹಾಗೂ ಪರ್ಮಿಟ್ ಪಡೆಯದವರು ಆಗಸ್ಟ್ ಒಳಗೆ ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿ ಪಡೆಯಬೇಕು. ನಿರ್ಲಕ್ಷ ವಹಿಸಿದಲ್ಲಿ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಸರಿಯಾಗಿ ದಾಖಲೆ ಇಟ್ಟುಕೊಳ್ಳದ ಹಾಗೂ ಲೈಸನ್ಸ್ ಹೊಂದಿರದ ಚಾಲಕರ ಆಟೊ ರಿಕ್ಷಾಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕಳಿಸಬಾರದು ಎಂದು ಮನವಿ ಮಾಡಿಕೊಳ್ಳುವುದು ಸಹ ಇನ್ನು ಅನಿವಾರ್ಯವಾಗಲಿದೆ ಎಂದು ಆಟೊ ಚಾಲಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
‘ಆಟೊ ಚಾಲಕರು ಕಡ್ಡಾಯವಾಗಿ ಪರ್ಮಿಟ್ ಪಡೆದುಕೊಳ್ಳಬೇಕು. ಪ್ರಯಾಣಿಕರ ಹಿತದೃಷ್ಟಿಯಿಂದ ವೆಹಿಕಲ್ ಇನ್ಸುರೆನ್ಸ್ ಮಾಡಬೇಕು. ಕೆಲವರು ಮಾಲೀಕತ್ವ ವರ್ಗಾವಣೆ ಮಾಡಿಕೊಂಡಿಲ್ಲ. ವಾಹನ ಚಾಲನಾ ಪರವಾನಗಿ ಸಹ ಪಡೆದುಕೊಂಡಿಲ್ಲ. ಲೈಸನ್ಸ್ ಇಲ್ಲದೇ ಆಟೊ ರಿಕ್ಷಾ ಚಲಾಯಿಸುವುದು ನಿಯಮಬಾಹಿರವಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್ ಪ್ರವೀಣ ಹೇಳಿದ್ದಾರೆ.
ಇನ್ಸುರೆನ್ಸ್ ರಿನಿವಲ್ ಮಾಡಿಕೊಳ್ಳದಿದ್ದರೆ ಕನಿಷ್ಠ ₹ 2 ಸಾವಿರ ದಂಡ ವಿಧಿಸುವುದು ಅನಿವಾರ್ಯವಾಗಲಿದೆ. ಪರ್ಮಿಟ್ ಡಿಎಲ್ ಹೊಂದಿಲ್ಲದಿದ್ದರೂ ದಂಡ ವಿಧಿಸಬೇಕಾಗಲಿದೆ ಎಂದು ಪೊಲೀಸರು ಎಚ್ಚರಿಕೆ ಕೊಟ್ಟ ನಂತರ ರಾಯಚೂರು ನಗರದ ಆಟೊ ಚಾಲಕರು ಒಂದು ತಿಂಗಳ ಸಮಯ ಕೇಳಿದ್ದಾರೆ. ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿ ಡಿಎಲ್ ಪರ್ಮಿಟ್ ಪಡೆಯಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗಲಿದೆ. ಹೀಗಾಗಿ ಮಾನವೀಯ ನೆಲೆಯಲ್ಲಿ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜುಲೈ ಅಂತ್ಯದವರೆಗೆ ಸಮಯಾವಕಾಶ ನೀಡಿದ್ದಾರೆ. ಆಗಸ್ಟ್ 1ರಂದು ನಡೆಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ದಾಖಲೆಗಳು ಇಲ್ಲದಿರುವುದು ಕಂಡು ಬಂದರೆ ನೇರವಾಗಿ ವಾಹನಗಳನ್ನು ಸೀಜ್ ಮಾಡಲು ನಿರ್ಧರಿಸಲಾಗಿದೆ.
ರಾಯಚೂರಿನ 50 ಆಟೊ ರಿಕ್ಷಾಗಳ ಚಾಲಕರಿಗೆ ತಲಾ ₹ 500 ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ಕಳಿಸಲಾಗಿದೆ-ಸಣ್ಣ ಈರೇಶ, ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.