ADVERTISEMENT

ಜಿಲ್ಲೆಯ ಎಲ್ಲೆಡೆ ಸಾಮೂಹಿಕ ಪ್ರಾರ್ಥನೆ

ಬಕ್ರೀದ್ ಪ್ರಯುಕ್ತ ವಿವಿಧ ಮಸೀದಿಗಳಲ್ಲಿ ನಮಾಜ್, ಅಡುಗೆ ತಯಾರಿಸಿ ಸವಿದ ಮುಸ್ಲಿಮರು: ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 17:13 IST
Last Updated 10 ಜುಲೈ 2022, 17:13 IST
ಬಕ್ರೀದ್ ಹಬ್ಬದ ಅಂಗವಾಗಿ ರಾಯಚೂರಿನ ಈದ್ಗಾ ಮೈದಾನದಲ್ಲಿ ಭಾನುವಾರ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು.
ಬಕ್ರೀದ್ ಹಬ್ಬದ ಅಂಗವಾಗಿ ರಾಯಚೂರಿನ ಈದ್ಗಾ ಮೈದಾನದಲ್ಲಿ ಭಾನುವಾರ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು.   

ರಾಯಚೂರು: ಬಕ್ರೀದ್ ಅಂಗವಾಗಿ ನಗರದ ಅರಬ್ ಮೊಹಲ್ಲಾ ಬಡಾವಣೆಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹಿರಿಯರು,‌ ಮಕ್ಕಳಾದಿಯಾಗಿ ಎಲ್ಲ ಮುಸ್ಲಿಮರು ಹೊಸ ಬಟ್ಟೆ ಧರಿಸಿ ಪ್ರಾರ್ಥನೆ ಮಾಡಿದರು. ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು.

ಈದ್ಗಾ ಮೈದಾನದ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ‌ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ADVERTISEMENT

ಇದೇ ವೇಳೆ ಮಾಜಿ ಶಾಸಕ ಸೈಯದ್ ಯಾಸೀನ್, ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಸೇರಿದಂತೆ ಹಲವು ನಾಯಕರು ಶುಭಾಶಯ ಕೋರಿದರು.

ಜಿಲ್ಲೆ ಹಾಗೂ ದೇಶದ ನಾಗರಿಕರ ಆರೋಗ್ಯ‌, ಆಯಸ್ಸು, ಮಳೆ ಹಾಗೂ ಶಾಂತಿ‌–ಸುವ್ಯವಸ್ಥೆಗಾಗಿ ಪ್ರಾರ್ಥಿಸಲಾಯಿತು. ಬಡಾವಣೆಗಳಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಮುಸ್ಲಿಮರು ತಮ್ಮ ಸಂಬಂಧಿಕರ, ಕುಟುಂಬ ಸದಸ್ಯರ ಮನೆಗಳಿಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಕಳೆದ ಎರಡು ವರ್ಷಗಳಿಂದ ಕೋವಿಡ್ ಇದ್ದಿದ್ದರಿಂದ ಸರಳ ಹಾಗೂ ಸಾಂಕೇತಿಕವಾಗಿ ಹಬ್ಬ ಆಚರಿಸಲಾಗಿತ್ತು. ಈ ಬಾರಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮುಖಂಡರಿಂದ ಶುಭಾಶಯ

ಮಾನ್ವಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮುಸ್ಲಿಂ ಸಮಾಜದವರು ಭಾನುವಾರ ಬಕ್ರೀದ್ ಆಚರಿಸಿದರು.

ಬೆಳಿಗ್ಗೆ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಸಮಾಜದವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.

ಮಕ್ಕಳು ಭಾಗಿ

ಹಟ್ಟಿಚಿನ್ನದಗಣಿ: ಪಟ್ಟಣದಲ್ಲಿ ಮುಸ್ಲಿಂ ಸಮಾಜದವರು ಭಾನುವಾರ ಬಕ್ರೀದ್ ಆಚರಿಸಿದರು.

ಮಳೆ ಕಾರಣಕ್ಕೆ ಈದ್ಗಾ ಮೈದಾನದ ಬದಲಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಹಟ್ಟಿ ಪಟ್ಟಣ ಸೇರಿದಂತೆ ಗೆಜ್ಜಲಗಟ್ಟಾ, ಆನ್ವರಿ, ಕೋಠಾ, ಗುರುಗುಂಟಾ, ನಿಲೋಗಲ್, ವೀರಾಪುರ ಸೇರಿ ಇತರ ಗ್ರಾಮಗಳಲ್ಲಿ ಬಕ್ರೀದ್ ಆಚರಿಸಲಾಯಿತು.

ಅಂಜುಮನ್ ಸಮಿತಿ ಅಧ್ಯಕ್ಷ ಜಾವೇದ್ ಅನ್ವರ್, ಕಾರ್ಯದರ್ಶಿ ನಿಯಾಜ್ ಅಹ್ಮದ್, ಮುಖಂಡರಾದ ಮಹ್ಮದ್ ಪಾಷಾ, ಎಸ್.ಎಂ.ಶಫಿ, ಮೊಹಿನುದ್ದೀನ್, ಎಂ.ಡಿ.ಅಮಿರ್‌ಅಲಿ, ಅಹ್ಮದ್‌ಸಾಬ್, ಕೌಸರ್ ಸಿದ್ದಿಕ್ಕಿ, ಜೆ.ಸುಬಾನ್, ಸೈಯದ್ ಶಂಶುದ್ದಿನ್, ಅಮೀನುದ್ದೀನ್ ಜಂತಾಪುರ ಹಾಗೂ ಎಲ್.ಮಹಿಬೂಬ್ ಇದ್ದರು.

ಬಟ್ಟೆ, ಹಣ ದಾನ

ಮುದಗಲ್: ಮುಸ್ಲಿಂ ಸಮುದಾಯದವರು ಬಕ್ರೀದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಸವಪಟ್ಟಣ ಹಾಗೂ ಕೋಟೆ ಮುಂಭಾಗದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಬಡವರಿಗೆ ಬಟ್ಟೆ ಹಾಗೂ ಹಣ ದಾನ ಮಾಡಿದರು.

ಭೋಜನ ಕೂಟ

ಸಿಂಧನೂರು: ತಾಲ್ಲೂಕಿನಾದ್ಯಂತ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮಾಜದವರು ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಮಳೆ ಸುರಿಯುತ್ತಿರುವ ಕಾರಣ ಬಪ್ಪೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ನೀರು ನಿಂತು ಹದಗೆಟ್ಟಿರುವುದರಿಂದ ನಗರದ ಪಟೇಲ್‍ ವಾಡಿ, ಮಹಿಬೂಬಿಯಾ ಕಾಲೊನಿ, ಗಂಗಾನಗರ, ಪಿಡಬ್ಲ್ಯೂಡಿ ಕ್ಯಾಂಪ್, ಲಕ್ಷ್ಮಿಕ್ಯಾಂಪ್, ಬಡಿಬೇಸ್, ಖದರಿಯಾ ಕಾಲೊನಿ, ಬಪ್ಪೂರು ರಸ್ತೆ, ಕೋಟೆ, ಇಂದಿರಾನಗರ, ಬಸ್ ನಿಲ್ದಾಣದ ಹಿಂದುಗಡೆ, ಜನತಾ ಕಾಲೊನಿ, ಎ.ಕೆ.ಗೋಪಾಲನಗರ, ಸುಕಾಲಪೇಟೆಯ 20 ಮಸೀದಿಗಳಲ್ಲಿ ಹಾಗೂ ತಾಲ್ಲೂಕಿನ ಜವಳಗೇರಾ, ಬಳಗಾನೂರು, ಸಾಲಗುಂದಾ, ಗಾಂಧಿನಗರ ಸೇರಿದಂತೆ ವಿವಿಧ ಗ್ರಾಮಗಳ ಮಸೀದಿಗಳಲ್ಲಿ ಬೆಳಿಗ್ಗೆ 6.30 ರಿಂದ 9.15 ರವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಧರ್ಮಗುರುಗಳು ಕುರಾನ್ ಪಠಿಸಿದರು.

ನಮಾಜ್ ಮುಗಿದ ನಂತರ ಮುಸ್ಲಿಂ ಬಾಂಧವರು ಬಡವರು ಹಾಗೂ ಸ್ನೇಹಿತರಿಗೆ ವಸ್ತ್ರ ಮತ್ತು ಹಣ ದಾನ ನೀಡಿದರು.

ಬಡಿಬೇಸ್ ಮಸೀದಿಗೆ ಶಾಸಕ ವೆಂಕಟರಾವ್ ನಾಡಗೌಡ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಹುಸೇನಸಾಬ, ಮುಖಂಡರಾದ ಬಾಬರ್‍ಪಾಷಾ, ಜಾಫರ್ ಜಾಗೀರದಾರ್, ಕೆ.ಜಿಲಾನಿಪಾಷಾ, ಮೋಯಿನುದ್ದೀನ್ ಖಾದ್ರಿ, ಖಾನ್‍ಸಾಬ, ಹುಸೇನಬಾಷಾ, ಮುನೀರ್‌ಪಾಷಾ, ಅನ್ವರ್‍ಮಿಯಾ, ಹಾಬೀದ್, ಸೈಯ್ಯದ್ ಆಸೀಫ್, ಅಮ್ಜದ್‍ಖಾನ್, ಸೈಯ್ಯದ್ ಅಲಿ ಮತ್ತಿತರರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ತದನಂತರ ಮುಸ್ಲಿಂ ಬಾಂಧವರು ತಮ್ಮ ಮನೆಗಳಿಗೆ ಬಂಧು-ಬಳಗದವರನ್ನು ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಭೋಜನ ಕೂಟ ಏರ್ಪಡಿಸಿ ಸಂಭ್ರಮಿಸಿದರು.

ಈದ್ಗಾ ಪ್ರಾರ್ಥನೆ ರದ್ದು

ಸಿರವಾರ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಮುಸ್ಲಿಮರು ಆಚರಿಸಿದರು.

ಮಳೆ ಕಾರಣದಿಂದ ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆಯಬೇಕಾಗಿದ್ದ ಸಾಮೂಹಿಕ ಪ್ರಾರ್ಥನೆ ರದ್ದುಗೊಳಿಸಲಾಯಿತು. ಪಟ್ಟಣದ ಮೂರು ಪ್ರಮುಖ ಮಸೀದಿಗಳಲ್ಲಿ ಬೆಳಿಗ್ಗೆ 7 ಮತ್ತು 9ಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿಲಾಗಿತ್ತು. ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ನೂರಾನಿ ಮಸೀದಿಗೆ ಶಾಸಕ ರಾಜಾವೆಂಕಟಪ್ಪ ನಾಯಕ ಅವರು ತೆರಳಿ ಶುಭಾಶಯ ಕೋರಿದರು. ರಾಜಾ ರಾಮಚಂದ್ರ ನಾಯಕ, ಜಿ.ಲೋಕರೆಡ್ಡಿ, ಚಂದ್ರಶೇಖರಯ್ಯ ಸ್ವಾಮಿ, ಕಾಶಿನಾಥ ಸರೋದೆ, ಈಶಪ್ಪ ಹೂಗಾರ ಹಾಗೂ ದಾನಪ್ಪ ಇದ್ದರು.

‘ದುಡಿತದ ಒಂದು ಭಾಗ ದಾನ ಮಾಡಿ’

ಜಾಲಹಳ್ಳಿ: ಪಟ್ಟಣದಲ್ಲಿ ಭಾನುವಾರ ಮುಸ್ಲಿಂ ಸಮಾಜದವರು ಬಕ್ರೀದ್ ಆಚರಿಸಿದರು. ಈದ್ಗಾ ಮೈದಾನದಲ್ಲಿ ಜಾಮಿಯಾ ಮಸೀದಿಯ ಮೌಲಾನಾ ಮುತ್ತಾಜ್ ರಾಯೇ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು,‘ಪ್ರತಿಯೊಬ್ಬ ಸ್ಥಿತಿವಂತ ಮುಸ್ಲಿಮರು ತಮ್ಮ ದುಡಿತದ ಒಂದು ಭಾಗವನ್ನು ಬಡವರಿಗೆ ದಾನ ಮಾಡಲೇಬೇಕು’ ಎಂದು ಹೇಳಿದರು.

ಪಟ್ಟಣದ ಅಲಾಯಿ ದೇವರ ಮಸೀದಿಯಿಂದ ಈದ್ಗಾ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಕ್ತೂಮ್ ಪಾರಸಿ, ಅಬ್ದುಲ್ ರಹಮಾನ್ ಖುರೈಷಿ, ಮುಖಂಡರಾದ ಹೈದರ್ ಸಾಬ್ ಮುಲ್ಲಾ, ಹುಸೇನ್ ಸಾಬ್ ನಾಶಿ, ಮೌಲಾಸಾಬ್ ಮಸನೂರು, ಹೈದರಸಾಬ್ ಉದ್ದಾರ್, ಹಾಜಿ ಮಲ್ಲಿಕ್ ಅಹ್ಮದ್, ಮೈನುದ್ದೀನ್ ಗುತ್ತಿಗೆದಾರ, ನಾಸೀರುದ್ದೀನ್ ಮುಲ್ಲಾ, ನೂರು ಮಹಮ್ಮದ್, ಅಲಿಬಾಬಾ ಪಟೇಲ್, ಜಾಕಿರ್ ಹುಸೇನ್ ಆರ್ತಿ, ಶಾಕೀಲ್ ಅಹ್ಮದ್, ಯಾಸೀನ್ ಸಾಬ್ ಮುಲ್ಲಾ ಹಾಗೂ ಸಲೀಂ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.