
ರಾಯಚೂರು ಪೊಲೀಸ್ ಮೈದಾನದಲ್ಲಿ ಗುರುವಾರ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಪಿ.ಎಸ್. ಹರ್ಷ ಅವರು ಆಧುನಿಕ ಶಸ್ತ್ರಾಸ್ತ್ರ ಪರಿಶೀಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಗ್ಷು ಗಿರಿ ಉಪಸ್ಥಿತರಿದ್ದರು
ರಾಯಚೂರು: ‘ಖಾಕಿ ಮೇಲೆ ಕೈ ಹಾಕಿದವರನ್ನು ನಾವು ಬಿಡಲ್ಲ. ಸಂಘಟಿತ ಅಪರಾಧಿಗಳಿಗೆ ಪೊಲೀಸರು ಹೆದರಿ ಕೆಲಸ ಮಾಡುವ ಅಗತ್ಯವಿಲ್ಲ. ಸರ್ಕಾರಿ ವ್ಯವಸ್ಥೆಗೆ ಅಡ್ಡಿಪಡಿಸದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಪಿ.ಎಸ್. ಹರ್ಷ ಪರೋಕ್ಷವಾಗಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದರು.
‘ವೈಟ್ ಕಾಲರ್ ಇರಲಿ, ಇನ್ಯಾರೋ ಇರಲಿ. ಕಾನೂನಿನ ಮುಂದೆ ಎಲ್ಲರೂ ಸರಿ ಸಮಾನರು. ಅಕ್ರಮ ಮರಳು ಗಣಿಗಾರಿಕೆ, ಮಾದಕ ವಸ್ತು ಹಾಗೂ ದ್ರವ್ಯ ಮಾರಾಟ, ಸಾಗಣೆ ತಡೆಗೆ ಪೊಲೀಸ್ ಇಲಾಖೆ ದಿಟ್ಟ ಕ್ರಮಕೈಗೊಳ್ಳಲಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಮೂಲಬೇರು ಹುಡುಕಿ ಮಟ್ಟ ಹಾಕಲಿದೆ’ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ರಾಯಚೂರು ಜಿಲ್ಲೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಗಡಿಗೆ ಹೊಂದಿಕೊಂಡಿದೆ. ಗಡಿ ಆಚೆಯಿಂದ ಸಿಎಚ್‌ಪೌಡರ್ ಹಾಗೂ ಗಾಂಜಾ ಬರುತ್ತಿರುವ ಮಾಹಿತಿ ಇದೆ. ಮಾದಕ ವಸ್ತುಗಳ ಸಾಗಣೆ ತಡೆಗಟ್ಟುವ ದಿಸೆಯಲ್ಲಿ ಶೀಘ್ರದಲ್ಲೇ ಜಿಲ್ಲಾ ಮಟ್ಟದಲ್ಲಿ ಅಂತರರಾಜ್ಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದರು.
‘ರಾಯಚೂರು ನಗರಕ್ಕೆ ಇನ್ನೊಂದು ಸಂಚಾರ ಪೊಲೀಸ್ ಠಾಣೆ ಅಗತ್ಯವಿರುವುದನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಇಲಾಖೆಯಲ್ಲಿ ನಿವೃತ್ತಿ ಹಾಗೂ ಹೊಸ ನೇಮಕಾತಿ ನಿರಂತರವಾಗಿ ನಡೆಯುತ್ತದೆ. ನಿವೃತ್ತಿಯ ಕಾರಣ ಪೊಲೀಸ್ ಸಂಖ್ಯಾ ಬಲ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಆದರೆ, ಕಾರ್ಯನಿರ್ವಹಣೆಗೆ ಅಗತ್ಯವಿರುವಷ್ಟು ಪೊಲೀಸರು ಜಿಲ್ಲೆಯಲ್ಲಿ ಇದ್ದಾರೆ’ ಎಂದು ಹೇಳಿದರು.
ಸೈಬರ್ ಪ್ರಕರಣ ಪತ್ತೆಯಲ್ಲಿ ಉತ್ತಮ: ‘ಸೈಬರ್ ಕ್ರೈಂ ಹೆಚ್ಚುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪೊಲೀಸರು ಹೊಸ ತಂತ್ರಜ್ಞಾನ ತರಬೇತಿ ನೀಡಲಾಗುತ್ತಿದೆ. ದೇಶದ ಬೇರೆ ರಾಜ್ಯಗಳಿಗೆ ಹೋದರೆ ಸೈಬರ್ ಅಪರಾಧ ಪ್ರಕರಣದಲ್ಲಿ ಹಣ ರಿಕವರಿ ಪ್ರಮಾಣ ಉತ್ತಮವಾಗಿದೆ’ ಎಂದು ಐಜಿಪಿ ಹರ್ಷ ಹೇಳಿದರು.
‘ಆನ್‌ಲೈನ್ ವ್ಯವಹಾರ ಅಥವಾ ಬ್ಯಾಂಕಿಂಗ್ ವ್ಯವಹಾರ ಮೂಲಕ ಹಣ ಕಳೆದುಕೊಂಡ ಅರ್ಧ ಗಂಟೆಯೊಳಗೆ ವ್ಯಕ್ತಿಗಳು 1093 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು. ಅರ್ಧಗಂಟೆ ಅವಧಿಯಲ್ಲಿ ಪೋನ್ ಮಾಡಿದರೆ ರಿಕವರಿ ಅವಕಾಶ ಅಧಿಕ ಇರುತ್ತದೆ. ಈ ಕುರಿತು ಹೆಚ್ಚಿನ ಜನ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಗ್ಷು ಗಿರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹಾಗೂ ಡಿವೈಎಸ್‌ಪಿಗಳು ಉಪಸ್ಥಿತರಿದ್ದರು.
ಆಕ್ರಮ ಮರಳು ದಂದೆಯಲ್ಲಿ ಪೊಲೀಸರ ಕೈವಾಡವಿದ್ದರೆ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಪಿ.ಎಸ್.ಹರ್ಷಬಳ್ಳಾರಿ ವಲಯ ಐಜಿಪಿ
‘ದೇವದುರ್ಗ ಶಾಸಕಿ ಕರೆಮ್ಮ ನಾಯಕ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸಂಬಂಧಪಟ್ಟವರಿಗೆ ಪೊಲೀಸ್ ನೋಟಿಸ್ ಕಳಿಸಲಾಗಿದೆ. ಈ ವಿಷಯದಲ್ಲಿ ಪೊಲೀಸರು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.
‘ಹಿಂದೆ ದೇವದುರ್ಗ ಶಾಸಕಿ ಕಡೆಯವರು ಎನ್ನಲಾದ ವ್ಯಕ್ತಿಗಳು ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ. ಈ ಪ್ರಕರಣದ ಇನ್ನಷ್ಟು ಮಾಹಿತಿ ಪಡೆದು ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.