ಸಿಂಧನೂರು: ‘ಕರ್ನಾಟಕ ರಾಜ್ಯದಲ್ಲಿ ಪಠ್ಯಪುಸ್ತಕ ಕುರಿತು ವಿವಾದ ಎದ್ದಿರುವುದಕ್ಕೆ ನಿಕಟಪೂರ್ವ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಾರಣ‘ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಪುಸ್ತಕಗಳನ್ನು ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯೇ ಪರಿಷ್ಕರಣೆ ಮಾಡಿದೆ. ಈಗ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯವನ್ನು ಪರಿಷ್ಕರಣೆ ಮಾಡಲಾಗಿದ್ದು, ಅದರಲ್ಲಿ ಭಗತ್‍ಸಿಂಗ್ ಕುರಿತಾದ ಪಾಠವನ್ನು ತೆಗೆದು ಹಾಕಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ವೀರರು ಎನ್ನುವ ಶಿರೋನಾಮೆಯಲ್ಲಿ ರಚನೆಯಾದ ಪಾಠದಲ್ಲಿ ಟಿಪ್ಪುಸುಲ್ತಾನ್ ಕುರಿತಾಗಿಯೇ ಬರೆಯಲಾಗಿದೆ. ವೀರಮದಕರಿ ನಾಯಕ, ಕಿತ್ತೂರುರಾಣಿ ಚೆನ್ನಮ್ಮ, ಹಲಗಲಿ ಬೇಡರು ಹೋರಾಡಿಲ್ಲವೇ, ಈಗ ಅವರನ್ನು ಸಹ ಸೇರ್ಪಡೆ ಮಾಡಿರುವುದು ತಪ್ಪೇ. ಇವರೆಲ್ಲ ಸಿದ್ದರಾಮಯ್ಯನ ವಿರುದ್ಧ ಹೋರಾಡಿದರೇ’ ಎಂದು ವ್ಯಂಗ್ಯವಾಡಿದರು.
‘ಮೈಸೂರು ಮಹಾರಾಜರು ತಮ್ಮ ಪತ್ನಿಯ ಬಂಗಾರವನ್ನು ಒತ್ತೆಯಿಟ್ಟು ಕೆಆರ್‌ಎಸ್ ಕಟ್ಟಿಸಿದ್ದಾರೆ. ಅಂಥವರ ಪಾಠ ಮಕ್ಕಳಿಗೆ ಬೇಡವೇ’ ಎಂದ ಸಚಿವರು, ‘ಸಿಂಧೂ ಸಂಸ್ಕೃತಿ ಎನ್ನುವ ಪಾಠ ತೆಗೆದು ನೆಹರೂ ಮಗಳಿಗೆ ಬರೆದ ಪತ್ರ ಎನ್ನುವ ಪಾಠ ಸೇರ್ಪಡೆ ಮಾಡಿರುವುದು ಸರಿಯೇ’ ಎಂದು ಪ್ರಶ್ನಿಸಿದ ಅವರು, ‘31 ಇತಿಹಾಸಕಾರರ ಪಟ್ಟಿಯಲ್ಲಿ ಎಲ್ಲ ಇಂಗ್ಲೀಷರ ಹೆಸರುಗಳಿವೆ. ಇವರಿಗೆ ಒಬ್ಬ ಭಾರತೀಯರು ಸಿಗಲಿಲ್ಲವೇ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿವಿಧ ಧರ್ಮಗಳ ಬಗ್ಗೆ ಬರೆಯಲಾಗಿದ್ದು, ಭಾರತೀಯ ಹಿಂದೂ ಧರ್ಮದ ಬಗ್ಗೆ ಚಕಾರವೆತ್ತುವ ಸೌಜನ್ಯವನ್ನು ಹಿಂದಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ವ್ಯಕ್ತ ಮಾಡಿರಲಿಲ್ಲ ಎಂದರು.
ಮಸ್ಕಿ ವಿಧಾನಸಭಾ ಕ್ಷೇತ್ರದ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಪ್ರೌಢಶಾಲೆ ಕಟ್ಟಡ ಇದ್ದು, 8ನೇ ತರಗತಿವರೆಗೆ ಓದಿದ ಮಕ್ಕಳಿಗೆ 9ನೇ ತರಗತಿಗೆ ಅವಕಾಶವಿಲ್ಲದೆ ಈಗ ಅತಂತ್ರವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ತಮ್ಮ ಗಮನಕ್ಕೆ ಬಂದಿದ್ದು, ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ ಹೇಳಿದರು.
ಸಂಸದ ಕರಡಿ ಸಂಗಣ್ಣ, ಶಾಸಕ ವೆಂಕಟರಾವ್ ನಾಡಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.