ADVERTISEMENT

‘ಮೇ 3ರಂದು ಬಸವ ಜಯಂತಿ; ಭಾವೈಕ್ಯ ಮೆರವಣಿಗೆ’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 12:15 IST
Last Updated 28 ಏಪ್ರಿಲ್ 2022, 12:15 IST
ಸಿಂಧನೂರಿನ ಬಸವ ಪ್ರಸಾದ ನಿಲಯದಲ್ಲಿ ಬಸವ ಜಯಂತಿ ಮತ್ತು ರಂಜಾನ್ ಹಬ್ಬದ ನಿಮಿತ್ತ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು
ಸಿಂಧನೂರಿನ ಬಸವ ಪ್ರಸಾದ ನಿಲಯದಲ್ಲಿ ಬಸವ ಜಯಂತಿ ಮತ್ತು ರಂಜಾನ್ ಹಬ್ಬದ ನಿಮಿತ್ತ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು   

ಸಿಂಧನೂರು: ವಿಶ್ವಗುರು ಬಸವಣ್ಣ ಜಯಂತಿ ಹಾಗೂ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಮೇ 3ರಂದು ಒಂದೇ ದಿನ ಬಂದಿರುವ ಕಾರಣ ಅಂದು ಸ್ತಬ್ಧಚಿತ್ರಗಳೊಂದಿಗೆ ನಗರದಾದ್ಯಂತ ಭಾವೈಕ್ಯ ಮೆರವಣಿಗೆ ನಡೆಸಲಾಗುವುದು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಇಲ್ಲಿನ ಬಸವ ಪ್ರಸಾದ ನಿಲಯದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಸವ ಸಂಘಟನೆಗಳ ಸಮಿತಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಈ ಬಾರಿ ಬಸವ ಜಯಂತಿ ಮತ್ತು ರಂಜಾನ್ ಹಬ್ಬವನ್ನು ವಿನೂತನವನ್ನು ಆಚರಿಸಲು ನಿರ್ಧರಿಸಲಾಗಿದೆ’ ಎಂದರು.

ಬೆಳಿಗ್ಗೆ ರಂಜಾನ್ ಪ್ರಯುಕ್ತ ಬಪ್ಪೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಬರುವ ಮುಸ್ಲಿಂ ಬಾಂಧವರಿಗೆ ಬಸವ ವೃತ್ತದಲ್ಲಿ ಬಸವಕೇಂದ್ರದಿಂದ ತಂಪು ಪಾನೀಯ ಮತ್ತು ಸಿಹಿ ಹಂಚಲಾಗುವುದು ಎಂದರು.

ADVERTISEMENT

ಮಧ್ಯಾಹ್ನ 4 ಗಂಟೆಗೆ ಹನ್ನೆರಡನೇ ಶತಮಾನದ ಅನುಭಾವ ಮಂಟಪದಲ್ಲಿದ್ದ ಬಸವಣ್ಣ ಸೇರಿ ಎಲ್ಲ ಶರಣರ ಭಾವಚಿತ್ರ ಮತ್ತು ವಚನಗಳು, ಇಸ್ಲಾಂನ ಮೆಕ್ಕಾ ಮದೀನಾ ಹಾಗೂ ಕುರಾನ್ ಶ್ಲೋಕಗಳ ಸ್ತಬ್ಧಚಿತ್ರಗಳನ್ನು ಮೆರವಣಿಗೆ ಮೂಲಕ ಸ್ಥಳೀಯ ಮಿನಿವಿಧಾನಸೌಧ ಆವರಣದಿಂದ ಬಸವ ವೃತ್ತ ಹೊರಡಲಿದೆ. ಅಲ್ಲಿ ಮುಸ್ಲಿಂ ಬಾಂಧವರು ತಂಪು ಪಾನೀಯ ನೀಡುವರು.

ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಮಾತನಾಡಿ ‘ಮನುಷ್ಯ ಮನುಷ್ಯತ್ವದ ಮಾನವೀಯತೆ ಕಾಣಬೇಕೆನ್ನುವ ಸದಾಶಯದಿಂದ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಭಾವೈಕ್ಯತೆ ಮತ್ತು ಸಾಮರಸ್ಯ ಬಯಸುವ ಮತ್ತು ಮನಸ್ಸುಗಳನ್ನು ಒಗ್ಗೂಡಿಸುವವರ ವಿನೂತನ ಮಾದರಿ ಕಾರ್ಯಕ್ರಮ ಇದಾಗಲಿದೆ’ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಮಹ್ಮದ್ ಹುಸೇನಸಾಬ ಮಾತನಾಡಿ ‘ಬಸವ ಜಯಂತಿ ಮತ್ತು ರಂಜಾನ್ ಹಬ್ಬವನ್ನು ಎಲ್ಲ ಜಾತಿ, ಧರ್ಮದವರೆಲ್ಲರೂ ಒಗ್ಗೂಡಿ ವಿನೂತನವಾಗಿ ಆಚರಿಸುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರೋಣ ಎಂಬ ಹಂಪನಗೌಡ ಬಾದರ್ಲಿಯವರ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಮಾನವರು ವಿಶ್ವಮಾನವರಾಗುವ ಮೊದಲ ಹೆಜ್ಜೆ ಸಿಂಧನೂರಿನಿಂದಲೇ ಆರಂಭವಾಗಲಿ’ ಎಂದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಟಿ.ಎಂ.ಪಾಟೀಲ, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಡಿ.ನದೀಮ್ ಮುಲ್ಲಾ, ಸದಸ್ಯ ಕೆ.ಜಿಲಾನಿಪಾಷಾ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ ಮಾತನಾಡಿದರು. ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಮುಖಂಡರಾದ ನಾಗಭೂಷಣ ನವಲಿ, ಕರೇಗೌಡ ಕುರುಕುಂದಿ, ಖಾದರ್‍ಸುಭಾನಿ, ಗುಂಡಪ್ಪ ಬಳಿಗಾರ, ಹೆಚ್.ಜಿ.ಹಂಪಣ್ಣ, ಬೀರಪ್ಪ ಶಂಭೋಜಿ, ಶಾಂತಪ್ಪ ಚಿಂಚಿರಿಕಿ, ಎಂ.ಭಾಸ್ಕರ್, ಶರಣಪ್ಪ ಟೆಂಗಿನಕಾಯಿ, ಖಾನ್‍ಸಾಬ್, ಜಹೀರುಲ್ಲಾ ಹಸನ್, ಹನುಮಂತಪ್ಪ ಬೇರ್ಗಿ, ಚಂದ್ರಶೇಖರ ಯರದಿಹಾಳ, ಈರಣ್ಣ ಅಲ್ಲೂರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.