
ಕವಿತಾಳ (ರಾಯಚೂರು ಜಿಲ್ಲೆ): ಪಟ್ಟಣದ ಪೊಲೀಸ್ ಠಾಣೆಯು ಕೇಂದ್ರ ಗೃಹ ಸಚಿವಾಲಯದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನವಾಗಿದೆ. ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಕವಿತಾಳ ಪೊಲೀಸ್ ಠಾಣೆಯು ತೃತೀಯ ಸ್ಥಾನ ಪಡೆದಿದೆ.
ಮಹಿಳಾ ದೂರುದಾರರಿಂದ ದೂರು ಸ್ವೀಕೃತಿ, ಪ್ರಕರಣ ದಾಖಲು, ಸಾರ್ವಜನಿಕರಿಗೆ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸ್ಪಂದನೆ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಉತ್ತಮ ಪರಿಸರ, ಸ್ವಚ್ಛತೆ, ಮೂಲಸೌಲಭ್ಯ ಸೇರಿದಂತೆ ಜನಸ್ನೇಹಿ ವ್ಯವಸ್ಥೆ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಾಥಮಿಕ ಹಂತದಲ್ಲಿ ಪ್ರಶಸ್ತಿಗೆ ಪರಿಗಣಿಸಲಾದ 78 ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಕವಿತಾಳ, ಬಳಗಾನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಗೇರಿ ಠಾಣೆಗಳನ್ನು ಗುರುತಿಸಲಾಗಿತ್ತು. ಅಂತಿಮ ಪಟ್ಟಿಯಲ್ಲಿ ಕವಿತಾಳ ಠಾಣೆ ತೃತೀಯ ಸ್ಥಾನ ಪಡೆದಿದೆ.
ನ. 28ರಂದು ಛತ್ತೀಸಗಡದ ರಾಯಪುರದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಯಾ ಠಾಣಾಧಿಕಾರಿಗಳಿಗೆ ಪ್ರಶಸ್ತಿ ವಿತರಿಸಲಿದ್ದು, ಕವಿತಾಳ ಠಾಣೆ ಎಸ್‌ಐ ಗುರುಚಂದ್ರ ಯಾದವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕೇಂದ್ರ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯ ಪೊಲೀಸ್ ವ್ಯವಸ್ಥೆಗೆ ಬಲ ತುಂಬಿದಂತಾಗಿದೆ. ಜನಸ್ನೇಹಿ ವ್ಯವಸ್ಥೆಯಲ್ಲಿ ಠಾಣಾಧಿಕಾರಿ ಸಿಬ್ಬಂದಿ ಪರಿಶ್ರಮವಿದೆ.– ಎಂ.ಪುಟ್ಟಮಾದಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು
ಕೇಂದ್ರ ಪ್ರಶಸ್ತಿ ಸ್ವೀಕರಿಸುವ ಸುವರ್ಣಾವಕಾಶ ಒದಗಿ ಬಂದಿರುವುದು ಸಂತಸ ತಂದಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದೆಯೂ ಉತ್ತಮ ಸೇವೆ ಒದಗಿಸಲಾಗುವುದು.– ಗುರುಚಂದ್ರ ಯಾದವ, ಎಸ್‌ಐ ಕವಿತಾಳ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.