ADVERTISEMENT

ಭಾರತ್‌ ಬಂದ್‌ಗೆ ರಾಯಚೂರಿನಲ್ಲಿ ಬಹುತೇಕ ಯಶಸ್ವಿ

ಸರ್ಕಾರಿ ಬಸ್‌ ಸಂಚಾರ ಸೇವೆ ಸ್ಥಗಿತ, ಶಾಲಾ ಕಾಲೇಜುಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 11:35 IST
Last Updated 8 ಜನವರಿ 2019, 11:35 IST
ಭಾರತ್‌ ಬಂದ್‌ ಕರೆಯಿಂದಾಗಿ ಸಂಚಾರ ಸೇವೆಯಿಲ್ಲದೆ ರಾಯಚೂರಿನ ಬಸ್‌ ಡಿಪೋದಲ್ಲಿ ನಿಂತಿದ್ದ ಸರ್ಕಾರಿ ಬಸ್‌ಗಳ ಒಂದು ನೋಟ
ಭಾರತ್‌ ಬಂದ್‌ ಕರೆಯಿಂದಾಗಿ ಸಂಚಾರ ಸೇವೆಯಿಲ್ಲದೆ ರಾಯಚೂರಿನ ಬಸ್‌ ಡಿಪೋದಲ್ಲಿ ನಿಂತಿದ್ದ ಸರ್ಕಾರಿ ಬಸ್‌ಗಳ ಒಂದು ನೋಟ   

ರಾಯಚೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಒತ್ತಾಯಿಸಿ ಎಡಪಕ್ಷ ಬೆಂಬಲಿತ ಕಾರ್ಮಿಕ ಸಂಘಟನೆಗಳು ನೀಡಿದ ಎರಡು ದಿನಗಳ ಭಾರತ್‌ ಬಂದ್‌ ಜಿಲ್ಲೆಯಲ್ಲಿ ಮಂಗಳವಾರ ಬಹುತೇಕ ಯಶಸ್ವಿಯಾಯಿತು.

ರಾಯಚೂರು ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ)ಯ ಎಂಟು ಡಿ‍ಪೋಗಳಿಂದ ಸರ್ಕಾರಿ ಬಸ್‌ ಸಂಚಾರ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಪೂರ್ವ ಮಾಹಿತಿಯಿಲ್ಲದೆ ಕೆಲವು ಜನರು ಬಸ್‌ ನಿಲ್ದಾಣಗಳಿಗೆ ಬಂದು ವಾಪಸ್‌ ಹೋಗುತ್ತಿರುವುದು ಕಂಡುಬಂತು. ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರವು ಸಂಪೂರ್ಣ ಸ್ಥಗಿತವಾಗಿತ್ತು.

ಆಟೊಗಳು ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಬೆಳಿಗ್ಗೆಯಿಂದ ಆರಂಭವಾಗಿತ್ತು. ಸರ್ಕಾರಿ ಬಸ್‌ ಸೇವೆಯಿಲ್ಲದಿರುವುದನ್ನು ಅವಕಾಶ ಮಾಡಿಕೊಂಡಿದ್ದ ಕೆಲವು ಖಾಸಗಿ ವಾಹನದಾರರು, ಪ್ರಯಾಣಿಕರಿಂದ ಹೆಚ್ಚು ಹಣ ಪಡೆದು ಕರೆದುಕೊಂಡು ಹೋಗುತ್ತಿರುವುದು ಕಂಡುಬಂತು.

ADVERTISEMENT

ರಾಯಚೂರು ಜಿಲ್ಲಾ ಕೇಂದ್ರ ಸೇರಿದಂತೆ ದೇವದುರ್ಗ, ಲಿಂಗಸುಗೂರು, ಸಿರವಾರ ಹಾಗೂ ಮಸ್ಕಿ ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಹಟ್ಟಿ, ಕವಿತಾಳ ಹೋಬಳಿ ತಾಣಗಳಲ್ಲಿ ಭಾರತ್‌ ಬಂದ್‌ ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಬೈಕ್‌ ರ್‍ಯಾಲಿ ನಡೆಸಿದರು. ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳು, ವಿಮಾ ಪ್ರತಿನಿಧಿಗಳ ಸಂಘಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿಕೊಂಡು ಬೆಂಬಲ ನೀಡುವಂತೆ ಕೆಲವು ಕಡೆಗಳಲ್ಲಿ ಪ್ರತಿಭಟನಾಕಾರರು ವ್ಯಾಪಾರಿಗಳಿಗೆ ಮನವಿ ಮಾಡಿಕೊಂಡರು.

ಶಕ್ತಿನಗರದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದರು. ಜಿಲ್ಲೆಯ ವಿವಿಧೆಡೆ ಸಿನಿಮಾ ಥೇಟರ್‌ಗಳಲ್ಲಿ ಪ್ರದರ್ಶನವಿದ್ದರೂ ಪ್ರೇಕ್ಷಕರ ಸಂಖ್ಯೆ ಎಂದಿನಂತೆ ಕಂಡು ಬರಲಿಲ್ಲ. ಆದರೆ, ಬಹುತೇಕ ಕಡೆ ಬ್ಯಾಂಕ್‌ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಸಿಂಧನೂರು, ಮುದಗಲ್‌, ಮಾನ್ವಿ ಹಾಗೂ ಜಾಲಹಳ್ಳಿಯಲ್ಲಿ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಎಡಪಕ್ಷಗಳ ಬೆಂಬಲಿತ ಕಾರ್ಮಿಕ ಸಂಘಟನೆಗಳ ಸದಸ್ಯರ ಕರೆಗೆ ಓಗೊಟ್ಟು ವ್ಯಾಪಾರಿಗಳು ಸ್ವಯಂ ಅಂಗಡಿ ಮುಗ್ಗಟ್ಟುಗಳನ್ನು ಸ್ಥಗಿತ ಮಾಡಿಕೊಂಡಿದ್ದರು. ಸಂಜೆವರೆಗೂ ಯಾವುದೇ ವ್ಯಾಪಾರ ಕಂಡು ಬರಲಿಲ್ಲ.

ಶಾಲಾ, ಕಾಲೇಜು ಬಂದ್‌

ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ, ಕಾಲೇಜುಗಳೆಲ್ಲ ಬಂದ್‌ ಆಗಿದ್ದವು. ಪ್ರತಿದಿನ ವಿದ್ಯಾರ್ಥಿಗಳ ಓಡಾಟದಿಂದ ಕೂಡಿರುತ್ತಿದ್ದ ಶಾಲಾ, ಕಾಲೇಜು ಕ್ಯಾಂಪಸ್‌ಗಳಲ್ಲಿ ರಜೆ ಘೋಷಣೆಯಿಂದಾಗಿ ಮೌನ ಆವರಿಸಿಕೊಂಡಿತ್ತು.

₹70 ಲಕ್ಷ ನಷ್ಟ

ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಸೇವೆ ಸ್ಥಗಿತಗೊಂಡಿದ್ದರಿಂದ ಒಂದು ದಿನದ ಆದಾಯ ಸಂಗ್ರಹ ₹70 ಲಕ್ಷ ನಷ್ಟವಾದಂತಾಗಿದೆ. ಜಿಲ್ಲೆಯ ಎಂಟು ಡಿಪೋಗಳಲ್ಲಿ ಒಟ್ಟು 612 ಸರ್ಕಾರಿ ಬಸ್‌ಗಳಿವೆ. ಮೂರು ಸಾವಿರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ್‌ ಬಂದ್‌ ಬುಧವಾರವೂ ಮುಂದುವರಿಯುತ್ತಿದೆ. ಆದರೆ, ಸರ್ಕಾರಿ ಬಸ್‌ ಸೇವೆ ಆರಂಭಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.