ADVERTISEMENT

ಬಿಜೆಪಿಯವರಿಂದ ನಾಟಕ: ಎನ್‌.ಎಸ್‌.ಬೋಸರಾಜ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 14:07 IST
Last Updated 17 ಜನವರಿ 2020, 14:07 IST
ಎನ್‌.ಎಸ್‌. ಬೋಸರಾಜು
ಎನ್‌.ಎಸ್‌. ಬೋಸರಾಜು   

ರಾಯಚೂರು: ದೇಶದ ಜನರ ಭಾವನೆಗಳನ್ನು ಕಡೆಗಣಿಸಿ ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವ ಬಿಜೆಪಿ, ನಿಜವಾದ ನಾಟಕ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಹೇಳಿಕೆಗೆ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಪ್ರತ್ಯುತ್ತರ ನೀಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆಗಳನ್ನು ಅರ್ಥ ಮಾಡಿಕೊಳ್ಳದೆ ಕಾಂಗ್ರೆಸ್‌ ನಾಟಕವಾಡುತ್ತಿದೆ ಎಂದು ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾಅವರು ಜನರಿಗೆ ಬೇಡವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸಲು ಹಠಮಾರಿ ಧೋರಣೆ ಪ್ರದರ್ಶಿಸುತ್ತಿದ್ದು, ಬಿಜೆಪಿಯಲ್ಲಿಯೇ ಅತಿಹೆಚ್ಚು ನಾಟಕ ನಡೆದಿದೆ ಎಂದರು.

ಜ್ವಲಂತ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಮರೆಮಾಚುತ್ತಿದ್ದು, ಜಾತ್ಯತೀತ ನೀತಿ ವಿರುದ್ಧ ನಡೆದುಕೊಳ್ಳುತ್ತಿದೆ. 900 ಕ್ಕೂ ಹೆಚ್ಚು ಬುದ್ಧಿಜೀವಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೂ ಕಾಯ್ದೆಗಳ ಜಾರಿಯಿಂದ ಹಿಂದಕ್ಕೆ ಸರಿಯುತ್ತಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಗಮನ ಹರಿಸುವುದನ್ನು ಕೈಬಿಟ್ಟು, ಜಿಎಸ್‌ಟಿ ಸಮರ್ಪಕ ಜಾರಿ ಮಾಡುವುದನ್ನು ಕೈಬಿಟ್ಟು, ಬೇಡವಾದ ಕೆಲಸಕ್ಕೆ ಸರ್ಕಾರ ಕೈಹಾಕಿದೆ ಎಂದು ಹೇಳಿದರು.

ADVERTISEMENT

ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗಾಗಲೇ ಜನರು ಬಿಜೆಪಿ ಕೈಬಿಟ್ಟಿದ್ದಾರೆ. ದೇಶದಲ್ಲಿ ಸರ್ಕಾರವೇ ಅಶಾಂತಿ ನಿರ್ಮಾಣ ಮಾಡುತ್ತಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ರಾಮಣ್ಣಾ ಇರಬಗೇರಾ, ರುದ್ರಪ್ಪ ಅಂಗಡಿ, ಅಬ್ದುಲ್‌ ಕರೀಂ, ಅಮರೇಗೌಡ ಹಂಚಿನಾಳ, ಕೆ.ಶಾಂತಪ್ಪ, ಜಿ.ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.