ADVERTISEMENT

ರಾಯಚೂರು: ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:38 IST
Last Updated 27 ಡಿಸೆಂಬರ್ 2025, 6:38 IST
ರಾಯಚೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ರಾಯಚೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ರಾಯಚೂರು: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ–2025 ಅನ್ನು ವಿರೋಧಿಸಿ ಬಿಜೆಪಿ ನಗರ ಘಟಕದ ವತಿಯಿಂದ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ,‘ರಾಜ್ಯ ಸರ್ಕಾರದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನ 19(1) ಪರಿಚ್ಚೇದ (2)ರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುತ್ತದೆ. ಅಂಬೇಡ್ಕರ್‌ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಿತ್ತುಕೊಳ್ಳುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚುವ ಸಾಧನವಾಗಿ ಈ ಕಾಯ್ದೆ ಬಳಕೆಯಾಗಲಿದೆ’ ಎಂದು ಆಪಾದಿಸಿದರು.

‘ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನ ಅಸ್ಪಷ್ಟವಾಗಿದ್ದು, ಸರ್ಕಾರದ ನೀತಿಗಳ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ ಮಾಡುವುದು ಮತ್ತು ಸತ್ಯ ಹೇಳುವುದನ್ನೂ ದ್ವೇಷ ಎಂದು ಪರಿಗಣಿಸುವ ಅವಕಾಶವಿದೆ’ ಎಂದು ಎಂದು ಆರೋಪಿಸಿದರು.

ADVERTISEMENT

ಪಕ್ಷದ ನಗರ ಘಟಕದ ಅಧ್ಯಕ್ಷ ಉಟ್ಕೂರು ರಾಘವೇಂದ್ರ,‘ಅನ್ಯಾಯ ಅಥವಾ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದಲ್ಲಿ ಭಾವನಾತ್ಮಕ ಹಾನಿ ಎಂದು ಪರಿಗಣಿಸಿ ಬಂಧಿಸಲು ಪೊಲೀಸರಿಗೆ ಅವಕಾಶ ಕಲ್ಪಿಸಿರುವುದು ಪತ್ರಕರ್ತರ ತನಿಖಾ ವರದಿಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ದೂರಿದರು.

ಪಕ್ಷದ ಮುಖಂಡರಾದ ಕಡಗೋಳ ರಾಮಚಂದ್ರ, ಬಂಡೇಶ ವಲ್ಕಂದಿನ್ನಿ, ಕಡಗೋಳ ಆಂಜನೇಯ, ನಾರಾಯಣರಾವ್‌ ಪುರತಿಪ್ಲಿ, ಶಿವಕುಮಾರ ಪಾಟೀಲ್‌, ರಾಜಕುಮಾರ, ವಿರೇಶ ಸಜ್ಜನ, ತಿರುಮಲರಾವ್‌, ಸಂದ್ರು ಬುಳ್ಳಾಪುರ, ಸಾವಿತ್ರಿ ಸರಡಾ, ಸುಲೋಚನ, ನಾಗವೇಣಿ, ಗುಡಿನರಸಪ್ಪ, ಮಾರೆಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.