ಎ. ವಸಂತಕುಮಾರ
ರಾಯಚೂರು: ‘ಒಂದು ನಿರ್ದಿಷ್ಟ ಜಾತಿ ಸಮುದಾಯವನ್ನು ಗುರಿಯಾಗಿಸಿಕೊಂಡು ಆ ಜಾತಿ ಸಮುದಾಯವನ್ನು ರಾಜಕೀಯ ಸಂಪೂರ್ಣ ನಿರ್ಮಾಣ ಮಾಡುವ ಉದ್ದೇಶದಿಂದ ಬಿಜೆಪಿಯು ಛಲವಾದಿ ನಾರಾಯಣಸ್ವಾಮಿ ಅವರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕುಮಾರ ಗಂಭೀರ ಆರೋಪ ಮಾಡಿದರು.
‘ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಮೂಲಕವೇ ರಾಜಕೀಯಕ್ಕೆ ಬಂದಿದ್ದಾರೆ. ಬಿಜೆಪಿ ಮುಖಂಡರ ಬಾಗಿಲು ಕಾಯ್ದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಆದರೆ, ಆ ಸ್ಥಾನದ ಘನತೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ‘ ಎಂದು ಪಕ್ಷದ ಕಚೇರಿಯಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಟೀಕಿಸಿದರು.
‘ನಾರಾಯಣ ಸ್ವಾಮಿ ವೈಯಕ್ತಿಕವಾಗಿ ಖರ್ಗೆ ಕುಟುಂಬದ ವಿರುದ್ಧ ಹೇಳಿಕೆ ನೀಡುತ್ತಿರುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುತ್ತಿಲ್ಲ. ಒಡೆದು ಆಳುವ ನೀತಿಯಿಂದಾಗಿಯೇ ಬಿಜೆಪಿ ಬೆತ್ತಲಾಗಿದೆ. ನಾರಾಯಣಸ್ವಾಮಿ ಮೊದಲು ತಮ್ಮನ್ನು ತಾವು ಮುಚ್ಚಿಕೊಳ್ಳಬೇಕು’ ಎಂದು ವಾಗ್ದಾಳಿ ನಡೆಸಿದರು.
‘ಬಿಜೆಪಿ ಹೊಸ ಯೋಜನೆಗಳ ಅನುಷ್ಠಾನ ಅಥವಾ ಲೋಪವನ್ನು ಎತ್ತಿ ತೋರಿಸಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿಲ್ಲ. ಬಿಜೆಪಿಯು ವೈಯಕ್ತಿಕ ದಾಳಿ, ಜಾತಿ, ಧರ್ಮಗಳಲ್ಲಿ ಒಡಕು ಮೂಡಿಸುವ ತನ್ನ ಚಾಳಿಯನ್ನು ಮುಂದುವರಿಸಿಕೊಂಡು ಬಂದಿದೆ. ಇಂತಹ ಪಕ್ಷದಿಂದ ಜನ ಎಚ್ಚರಿಕೆ ವಹಿಸಬೇಕು‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.