‘ಕರ್ನಾಟಕ ದರ್ಶನ’ದ ಜುಲೈ 9ರ ಸಂಚಿಕೆಯ ಪುಟ2 ರಲ್ಲಿ ‘ಮುಳುಗದ ಸೇತುವೆಯ ಕಥೆ’ ಎಂಬ ಶೀರ್ಷಿಕೆಯ ಲೇಖನ ಪ್ರಕಟವಾಗಿತ್ತು. ರಾಯಚೂರು ಹಾಗೂ ತೆಲಂಗಾಣದ ಕೃಷ್ಣಾ ಜಿಲ್ಲೆಗಳನ್ನು ಸಂಪರ್ಕಿಸುವ ಸೀರತ್-ಏ-ಜೂದಿ ಸೇತುವೆಯ ಕಥೆ. ಈ ಸೇತುವೆ ಕೆಳಗೆ ಕೃಷ್ಣಾ ನದಿ ಹರಿಯುತ್ತದೆ.
ಮುಕ್ಕಾಲು ಶತಮಾನ ಕಂಡಿರುವ ಈ ಸೇತುವೆ ಎಂಥದ್ದೇ ಪ್ರವಾಹ ಬಂದಾಗಲೂ ಮುಳುಗಿಲ್ಲ. ಇತ್ತೀಚೆಗೆ ಕೃಷ್ಣಾ ನದಿ ತುಂಬಿ ಹರಿದಾಗ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಬೇರೆ ಬೇರೆ ಕಡೆ ಸೇತುವೆಗಳು ಮುಳುಗಡೆಯಾದವು. ಆದರೆ ಈ ಸೇತುವೆ ಮುಳುಗಲಿಲ್ಲ.
ನನ್ನ ಮೂರು ದಶಕಗಳ ಸರ್ವೀಸ್‌ನಲ್ಲಿ ಈ ಸೇತುವೆಯನ್ನು ನೋಡುತ್ತಾ ಬಂದಿದ್ದೇನೆ. 2009ರಲ್ಲಿ ಪ್ರವಾಹ ಬಂದಾಗಲೂ ಇಲ್ಲಿಗೆ ಭೇಟಿ ನೀಡಿದ್ದೆ. ಆಗಲೂ ಸೇತುವೆ ಮುಳುಗಿರಲಿಲ್ಲ.
ನಿಜ, ಅದೆಷ್ಟೇ ಪ್ರಮಾಣದ ಪ್ರವಾಹ ಬಂದರೂ ಸೀರತ್-ಏ-ಜೂದಿ ಸೇತುವೆ ಮುಳುಗುವುದಿಲ್ಲ. ಅದಕ್ಕೆ ಕಾರಣಗಳಿವೆ. ಅಂದಿನ ಎಂಜಿನಿಯರ್‌ಗಳು ಸೇತುವೆ ಕಟ್ಟುವ ಮೊದಲಿನ ದಶಕಗಳ ಮಳೆ ಹಾಗೂ ಪ್ರವಾಹದ ಅಂಕಿ-ಅಂಶಗಳನ್ನು ಪರಿಗಣಿಸಿ ಪ್ರತಿಯೊಂದು ಕಂಬ-ಕಮಾನುಗಳನ್ನು ನಿರ್ಮಿಸಿದ್ದಾರೆ. ಎರಡು ಕಂಬಗಳ ನಡುವಿನ ರಚನೆ ತಳಮಟ್ಟದಲ್ಲಿ ಅಗಾಧ ಪ್ರಮಾಣದ ಪ್ರವಾಹದ ಹರಿವು ತಡೆದುಕೊಳ್ಳುವ ಹಾಗೂ ನೀರು ಮೇಲೆ ಏರಿದಂತೆ ಕಮಾನಿನ ತುದಿಯಲ್ಲಿ ನೀರು ಅತ್ಯಂತ ಸರಾಗವಾಗಿ ಹಾಗೂ ವೇಗವಾಗಿ ಹೋಗುವಂತೆ ಕಂಬಗಳನ್ನು ವಿನ್ಯಾಸಗೊಳಿಸಿದ್ದಾರೆ.
ಒಬ್ಬ ಎಂಜಿನಿಯರ್ ಆಗಿ ನಾನು ಗಮನಿಸಿದಂತೆ, ಸೇತುವೆಗೆ ಬಳಸಲಾಗಿರುವ ಕಚ್ಚಾ ಪದಾರ್ಥಗಳ ಗುಣಮಟ್ಟವೂ ಉತ್ಕ್ರಷ್ಟವಾಗಿದೆ. ಇದು ಸೇತುವೆಯ ಬಾಳಿಕೆಯ ಗುಟ್ಟು. ತಾಂತ್ರಿಕ ಹಾಗೂ ಎಂಜಿನಿಯರಿಂಗ್ ಅಂಶಗಳಲ್ಲಿ ಅತ್ಯಂತ ನಿಖರತೆ ಇದೆ. ಮುಖ್ಯವಾಗಿ ಕಟ್ಟಡದ ಉಸ್ತುವಾರಿ, ನಿರ್ವಹಣೆ ಹಾಗೂ ಕೌಶಲಯುಕ್ತ ಕಟ್ಟಡ ಕಾರ್ಮಿಕರ ಸಮರ್ಪಣಾ ಭಾವ ಮುಳುಗದ ಸೇತುವೆಯ ಗಟ್ಟಿತನದ ಗುಟ್ಟು.
–ಕೆ. ವಿ. ಮಾಗಳದ, ನಿವೃತ್ತ ಎಂಜಿನಿಯರ್, ಆರ್‌ಟಿಪಿಎಸ್, ಶಕ್ತಿನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.