ADVERTISEMENT

ಮೃತ ಕತ್ತೆಕಿರುಬ ಪತ್ತೆ: ಅರಣ್ಯ ಇಲಾಖೆಯಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:08 IST
Last Updated 12 ಜೂನ್ 2022, 6:08 IST
ಕತ್ತೆಕಿರುಬ
ಕತ್ತೆಕಿರುಬ   

ರಾಯಚೂರು: ಲಿಂಗಸುಗೂರು ತಾಲ್ಲೂಕು ಮುದಗಲ್‌ ಬಳಿ ಹಾಲಭಾವಿ ಕರಿಯಪ್ಪಗುಡ್ಡದಲ್ಲಿ ಕತ್ತಕಿರುಬ (ಹೈನಾ) ಗಾಯಗೊಂಡು ಮೃತಪಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಪ್ರಾಣಿಯ ಬಾಯಿಯಲ್ಲಿ ರಕ್ತಸ್ರಾವ ಆದ ಗುರುತುಗಳಿದ್ದು, ಕಲ್ಲುಹೊಡೆದು ಸಾಯಿಸಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

‘ಸಾಮಾಜಿಕ ಜಾಲತಾಣದಲ್ಲಿ ದೊರೆತ ಚಿತ್ರ ಆಧರಿಸಿ, ಹೈನಾ ಮೃತಪಟ್ಟ ಸ್ಥಳವನ್ನುಲಿಂಗಸುಗೂರು ವಲಯ ಅರಣ್ಯಾಧಿಕಾರಿ ಚನ್ನಬಸಪ್ಪ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಫಯಾಜ್‌ ಗುರುತಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಮಾಡಲಾಗುವುದು’ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಮುದಗಲ್‌ನಲ್ಲಿ ಯಾವುದೇ ಸಂರಕ್ಷಿತ ಅರಣ್ಯವಿಲ್ಲ. ಅಲ್ಲಿರುವ ಗುಡ್ಡಗಳು ಸರ್ಕಾರಿ ಜಾಗಗಳಾಗಿದ್ದು, ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಆ ಕಡೆಗೆ ಗಸ್ತು ಹೋಗುವುದಿಲ್ಲ. ಇಂಥ ಗುಡ್ಡಗಳನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯಲು ಕ್ರಮ ವಹಿಸಲಾಗುವುದು’ ಎಂದರು.

ಮುದಗಲ್‌ನಲ್ಲಿ ಪಟ್ಟಿಗಳಿರುವ ಹೈನಾವನ್ನು ಕಲ್ಲಿನಿಂದ ಹೊಡೆದು ಸಾಯಿಸಿದರೂ ಅರಣ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಮೃತ ಹೈನಾ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.