ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಕೊಡುಗೆಯಿಲ್ಲ: ವೀರಪ್ಪ ಮೊಯ್ಲಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 9:15 IST
Last Updated 21 ಏಪ್ರಿಲ್ 2019, 9:15 IST
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ   

ರಾಯಚೂರು:ಕೇಂದ್ರ ಸರ್ಕಾರವು ರಾಜ್ಯಕ್ಕೆ ಯಾವುದೇ ವಿಶೇಷ ಯೋಜನೆಗಳ ಕೊಡುಗೆಯನ್ನು ನೀಡಿಲ್ಲ. ಹೈದರಾಬಾದ್‌ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಸ್ಪಂದಿಸುತ್ತಾ ಬಂದಿದೆ ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಗೃಹ ಸಚಿವ ಎಲ್‌.ಕೆ. ಅಡ್ವಾಣಿ ಅವರಿಗೆ ಪತ್ರ ಬರೆದು 371(ಜೆ) ಜಾರಿ ಕೋರಲಾಗಿತ್ತು. ಅನೇಕ ಸಲ ಬೇಡಿಕೆ ತಿರಸ್ಕರಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರವು ವಿಶೇಷ ಮೀಸಲಾತಿ ಕಲ್ಪಿಸಿದ್ದು, ಶೇ 90 ರಷ್ಟು ಭಾಗ ಅನುಷ್ಠಾನವಾಗಿದೆ ಎಂದರು.

371(ಜೆ)ಯಲ್ಲಿ ಕೆಲವು ನ್ಯೂನ್ಯತೆಗಳು ಇದ್ದಿರಬಹುದು. ಅವುಗಳನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್‌ ಮಾತ್ರ ಮಾಡಬಲ್ಲದು. ದ್ವೇಷದ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿಗೆ ವಿರೋಧವಾಗಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುವ ಪ್ರಧಾನಿ ಆಗಿರುವುದು ಇದೇ ಮೊದಲು ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಮೋದಿ ಅಲೆಯಿಲ್ಲ, ಎಲೆಗಳು ಮಾತ್ರ ಉಳಿದಿವೆ. ದೇಶದ ಮಧ್ಯಭಾಗದ ಮೂರು ರಾಜ್ಯಗಳಲ್ಲಿ ಸೋತ ಬಳಿಕ ಅಲೆಗಳು ಉಳಿದಿಲ್ಲ. ಯಾವುದೇ ರಾಜ್ಯಕ್ಕೆ ಹೋದರೂ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್‌ ಪಕ್ಷದ ಪರ ಒಲವು ಹೆಚ್ಚಾಗಿದೆ. ಕೇಂದ್ರದಲ್ಲಿ ಮಹಾಘಟಬಂದನ್‌ ಪಕ್ಷಗಳಿಗೆ ಹೆಚ್ಚು ಸ್ಥಾನಗಳು ಬರಲಿವೆ ಎಂದು ತಿಳಿಸಿದರು.

ರಾಹುಲ್‌ ಗಾಂಧಿ ಅವರ ಪೌರತ್ವ ಪ್ರಶ್ನಿಸುವುದು ಮೂರ್ಖತನದಿಂದ ಕೂಡಿದೆ. ಕರ್ನಾಟಕದಲ್ಲೂ ಬಿಜೆಪಿ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಅದೇ ದೊಡ್ಡ ಸಾಧನೆಯಾಗುತ್ತದೆ ಎಂದು ಹೇಳಿದರು.

ಮಹಿಳಾ ಘಟಕದ ಅಧ್ಯಕ್ಷೆ‌ ನಿರ್ಮಲಾ ಬೆಣ್ಣೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಷಾ ಇರಬಗೇರಾ, ಮುಖಂಡರಾದ ರುದ್ರಪ್ಪ‌ ಅಂಗಡಿ, ಜಿ.ಬಸವರಾಜ ರೆಡ್ಡಿ, ಪಾರಸಮಲ್ ಸುಖಾಣಿ, ಸೈಯದ್ ಯಾಸೀನ್, ವಸಂತಕುಮಾರ, ಕೆ. ಶಾಂತಪ್ಪ, ಜಯವಂತರಾವ್ ಪತಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.