ADVERTISEMENT

ಕ್ರಿಸ್‌ಮಸ್ ಹಬ್ಬದ ಆಚರಣೆಗೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:26 IST
Last Updated 24 ಡಿಸೆಂಬರ್ 2025, 5:26 IST
ರಾಯಚೂರು ನಗರದ ನಿವಾಸಿ ರಾಣಿ ರಿಚರ್ಡ್ ಅವರು ಕ್ರಿಸ್‌ಮಸ್ ಹಬ್ಬದ ಅಂಗವಾಗಿ ತಮ್ಮ ಮನೆಗಳಲ್ಲಿ ಅಲಂಕಾರ ಮಾಡುತ್ತಿರುವುದು
ರಾಯಚೂರು ನಗರದ ನಿವಾಸಿ ರಾಣಿ ರಿಚರ್ಡ್ ಅವರು ಕ್ರಿಸ್‌ಮಸ್ ಹಬ್ಬದ ಅಂಗವಾಗಿ ತಮ್ಮ ಮನೆಗಳಲ್ಲಿ ಅಲಂಕಾರ ಮಾಡುತ್ತಿರುವುದು   

ರಾಯಚೂರು: ಡಿ.25ರಂದು ಕ್ರಿಸ್‌ಮಸ್ ಹಬ್ಬದ ಆಚರಣೆಗೆ ಜಿಲ್ಲಾದ್ಯಂತ ಕ್ರೈಸ್ತ ಸಮುದಾಯದವರ ಮನೆ ಮನೆಗಳಲ್ಲಿ ಹಾಗೂ ಚರ್ಚಗಳಲ್ಲಿ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕಾಗಿ ಭರದ ಸಿದ್ಧತೆ ನಡೆದಿದೆ.

ಕ್ರಿಸ್ತರ ಜನನದ ಹಬ್ಬವನ್ನು ಆಚರಿಸಿಕೊಳ್ಳಲು ಅಣಿಯಾಗುತ್ತಿರುವ ಈ ಸುಸಂದರ್ಭ ಕ್ರೈಸ್ತ ಧರ್ಮಕೇಂದ್ರಗಳಿಂದ ಮನೆ ಮನೆಗಳಿಗೆ ತೆರಳಿ ಯೇಸುಕ್ರಿಸ್ತರ ಜನನದ ಕ್ಯಾರೋಲ್ಸ್ ಅಂಗವಾಗಿ ಸಾಂತಕ್ಲಾಸ್ ವೇಷಧಾರಿ, ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ಗಾಯನ ವೃಂದದವರು ಪ್ರಾರ್ಥಿಸಿ, ಕ್ರಿಸ್ತರ ಶುಭಸಂದೇಶವನ್ನು ವಾಚಿಸಿ ಮನೆಯ ಮಂದಿಗೆ ಆಶೀರ್ವಚಿಸಿ ಶುಭಾಶಯ ಕೋರಿ ಈ ಹಬ್ಬದ ವೈಶಿಷ್ಟ್ಯತೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡುವುದು ವಾಡಿಕೆಯಾಗಿದೆ.

ಕ್ರೈಸ್ತ ಸಮುದಾಯದವರು ಡಿಸೆಂಬರ್ ತಿಂಗಳಲ್ಲಿ ಮನೆಗಳಿಗೆ ಸುಣ್ಣ ಬಣ್ಣ ಬಳಿದು ವಿವಿಧ ಬಗೆಯ ನಕ್ಷತ್ರಗಳನ್ನು ಮನೆಯ ಮೇಲ್ಛಾವಣಿಗಳ ಮೇಲೆ ಅಳವಡಿಸುತ್ತಾರೆ. ಮನೆಗಳಲ್ಲಿ ಕ್ರಿಸ್ತನ ಜನನದ ಸ್ಥಳವಾದ ಗೋದಲಿ (ದನದಕೊಟ್ಟಿಗೆ) ನಿರ್ಮಾಣವಾದರೆ, ಮಹಿಳೆಯರು ವಿವಿಧ ಬಗೆ ಬಗೆಯ ತಿಂಡಿ ಖಾದ್ಯಗಳನ್ನು ತಯಾರಿಸುವ ಸಡಗರ ಸಂಭ್ರಮಕ್ಕೆ ಅಣಿಯಾಗುತ್ತಿರುವಂತೆಯೇ ಸಾಂತಕ್ಲಾಸ್ ಅವರನ್ನು ಒಳಗೊಂಡ ಕ್ಯಾರೋಲ್ಸ್ ತಂಡವು ಆಗಮಿಸಿ ಆಶೀರ್ವಚನ ನೀಡಿ ಮನೆಯ ಮಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದೇ ಈ ಹಬ್ಬದ ವಿಶೇಷತೆ.

ADVERTISEMENT

ನಗರದ ಎಸ್‌ಬಿಎಚ್ ಕಾಲೊನಿ ನಿವಾಸಿ ರಾಣಿ ರಾಣಿ ರಿಚರ್ಡ್ ಅವರು ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ 1ರಿಂದ ಮನೆಯಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಪ್ರತಿನಿತ್ಯವೂ ವಿಶೇಷ ತಿನಿಸು ತಯಾರಿಸುವ ಮೂಲಕ ಹಬ್ಬ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಜಿಲ್ಲಾದ್ಯಂತ ಕ್ರೈಸ್ತ ಧರ್ಮಗುರುಗಳು, ಕ್ರೈಸ್ತ ದೇವಾಲಯಗಳಲ್ಲಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಗಳಲ್ಲಿ ವಿವಿಧ ಬಣ್ಣ ಬಣ್ಣದ ನಕ್ಷತ್ರಗಳ ಮಿನುಗು ಕ್ರಿಸ್ತರು ಜನಿಸಿದ ಸ್ಥಳ ದನದಕೊಟ್ಟಿಗೆ (ಗೋದಲಿ) ನಿರ್ಮಾಣದೊಂದಿಗೆ ದೇವಾಲಯ ಅಲಂಕಾರದ ಸಿದ್ಧತೆಯಲ್ಲಿ ತೊಡಗಿರುವುದು ಕಂಡು ಬಂತು. ನಗರದ ಸ್ಟೇಷನ್ ರಸ್ತೆಯಲ್ಲಿನ ಅಂಗಡಿಗಳಲ್ಲಿ ಅಲಂಕಾರಿಕ ವಸ್ತುಗಳ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಕಂಡು ಬಂತು.

ರಾಯಚೂರು ಸ್ಟೇಷನ್ ರಸ್ತೆಯಲ್ಲಿನ ಅಂಗಡಿಗಳಲ್ಲಿ ಕ್ರಿಸ್‌ಮಸ್ ಹಬ್ಬಕ್ಕಾಗಿ ಅಲಂಕಾರಕ್ಕಾಗಿ ವಸ್ತುಗಳ ಖರೀದಿಗೆ ಮುಂದಾದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.