ಸಾಂದರ್ಭಿಕ ಚಿತ್ರ
ರಾಯಚೂರು: ನಗರದ ನಿಜಲಿಂಗಪ್ಪ ಕಾಲೊನಿಯ ಎಟಿಎಂ ಸರ್ಕಲ್ ಬಳಿ ಮಂಗಳವಾರ ಮತಯಾಚನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕೈ–ಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಲಾಠಿ ಬೀಸಿ ಕಾರ್ಯಕರ್ತರನ್ನು ಚದುರಿಸಿದ್ದಾರೆ.
ಸಚಿವ ಎನ್.ಎಸ್.ಬೋಸರಾಜು ನಿವಾಸದ ಎದುರು ವಾರ್ಡ್ ಸಂಖ್ಯೆ–1ರ ನಗರಸಭೆ ಸದಸ್ಯೆಯ ಮಗ, ಬಿಜೆಪಿ ಕಾರ್ಯಕರ್ತ ಸನ್ನಿ ರೊನಾಲ್ಡ್ ತಮ್ಮ ಬೆಂಬಲಿಗರೊಂದಿಗೆ ಬ್ಯಾಂಡ್–ಬಾಜಾದೊಂದಿಗೆ ಮೆರವಣಿಗೆ ಮೂಲಕ ಪ್ರಚಾರ ಮಾಡಿದರು.
ಸ್ವಲ್ಪ ಸಮಯದ ನಂತರ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕೈ–ಕೈ ಮಿಲಾಯಿಸುವ ಹಂತ ತಲುಪಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಕಳಿಸಲು ಪ್ರಯತ್ನಿಸಿದರು. ಸಚಿವರ ಪುತ್ರ, ಮುಖಂಡ ರವಿ ಬೋಸರಾಜು ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರೂ ವಾತಾವರಣ ತಿಳಿಗೊಳ್ಳಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಕಾರ್ಯಕರ್ತರತ್ತ ಲಾಠಿ ಬೀಸಿ ಗುಂಪನ್ನು ಚದುರಿಸಿದರು.
ಎರಡು ದಿನಗಳಿಂದ ಪ್ರಚಾರದ ವೇಳೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುತ್ತಿದೆ. ಸೋಮವಾರ ನಗರದ ಸ್ಟೇಷನ್ ಏರಿಯಾದಲ್ಲೂ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹಾಗೂ ಬಿಜೆಪಿ ಕಾರ್ಯಕರ್ತ ಸನ್ನಿ ರೊನಾಲ್ಡ್ ನಡುವೆ ವಾಗ್ವಾದ ನಡೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದ್ದರು. ಸನ್ನಿ ಅವರು ಶಾಸಕ ಡಾ.ಶಿವರಾಜ ಪಾಟೀಲ ಆಪ್ತರಲ್ಲಿ ಒಬ್ಬರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.