ADVERTISEMENT

ರೈತರ ಸಾಲಮನ್ನಾ ಬಗ್ಗೆ ಮುಖ್ಯಮಂತ್ರಿಯಿಂದ ಗೊಂದಲ ಸೃಷ್ಟಿ: ಕೋಡಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 10:16 IST
Last Updated 12 ನವೆಂಬರ್ 2018, 10:16 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ರಾಯಚೂರು: ರೈತರ ಸಾಲಮನ್ನಾ ವಿಷಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದರು.

ನಗರದ ಜೆ.ಸಿ. ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿವಿಧ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲಮನ್ನಾ ದಾಖಲೆಗಳನ್ನು ಮುಖ್ಯಮಂತ್ರಿಗೆ ದಾಖಲೆಗಳ ಸಮೇತ ಶೀಘ್ರದಲ್ಲೆ ಒದಗಿಸಿ ಸಾಲಮನ್ನಾ ಮಾಡುವಂತೆ ಒತ್ತಾಯಿಸಲಾಗುವುದು. ಅನಗತ್ಯ ಕಾಲಹರಣ ಮಾಡುವುದು ಮತ್ತು ವೈಚಾರಿಕ ಸ್ಪಷ್ಟತೆಯಿಲ್ಲದೆ ಗೊಂದಲ ಮೂಡಿಸುವುದನ್ನು ಕೈ ಬಿಡುವಂತೆ ಒತ್ತಾಯಿಸಲಾಗುವುದು ಎಂದರು.

ADVERTISEMENT

ಅಧಿಕಾರ ವಹಿಸಿಕೊಂಡು 24 ಗಂಟೆಯೊಳಗೆ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರೈತರಿಗೆ ನೀಡಿದ್ದ ಭರವಸೆಯನ್ನು ಮರೆತಿದ್ದಾರೆ ಎಂದು ಹೇಳಿದರು.

ದೇಶದ ಕೃಷಿ ಹಾಗೂ ರೈತರ ಬದುಕು ಸುಧಾರಿಸಲು ಎಂ.ಎಸ್‌. ಸ್ವಾಮಿನಾಥನ್‌ ವರದಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ನವೆಂಬರ್‌ 30 ರಂದು ದೇಶದ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ದೆಹಲಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ದೆಹಲಿ ಹೋರಾಟದ ಪೂರ್ವ ತಯಾರಿಗಾಗಿ ರಾಯಚೂರಿನಲ್ಲಿ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು. ರೈತರ ಸಂಕಷ್ಟದ ಸನ್ನಿವೇಶದಲ್ಲಿ ಬ್ಯಾಂಕುಗಳು ನೀಡುತ್ತಿರುವ ನೋಟಿಸ್‌ಗೆ ಆತಂಕ ಪಡುವ ಅಗತ್ಯವಿಲ್ಲ. ಸಂಕಷ್ಟಕ್ಕೀಡಾದ ರೈತರ ಪರವಾಗಿ ಸಂಘಟನೆಯು ಹೋರಾಟ ನಡೆಸಲು ಸಿದ್ಧವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.