ADVERTISEMENT

ರಾಯಚೂರು | ಜಾತ್ಯತೀತ ಮಠ ನಿರ್ಮಾಣವಾಗಲಿ: ಮುಖ್ಯಮಂತ್ರಿ ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:04 IST
Last Updated 2 ಫೆಬ್ರುವರಿ 2026, 3:04 IST
ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದಲ್ಲಿ ಭಾನುವಾರ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಎನ್‌.ಎಸ್‌.ಬೋಸರಾಜು, ಶಿವರಾಜ ತಂಗಡಗಿ ಉಪಸ್ಥಿತರಿದ್ದರು
ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದಲ್ಲಿ ಭಾನುವಾರ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಎನ್‌.ಎಸ್‌.ಬೋಸರಾಜು, ಶಿವರಾಜ ತಂಗಡಗಿ ಉಪಸ್ಥಿತರಿದ್ದರು   

ಜಾಲಹಳ್ಳಿ/ ರಾಯಚೂರು: ‘ಜಾತ್ಯತೀತ ದ ಮಠ ನಿರ್ಮಾಣವಾಗಬೇಕು. ಮನುಷ್ಯರನ್ನೆಲ್ಲಾ  ಒಂದುಗೂಡಿಸಬೇಕು, ಎಲ್ಲರೂ ಒಂದೇ ಅನ್ನೋದು ಬರಬೇಕು‘ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದಲ್ಲಿ ಭಾನುವಾರ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಧರ್ಮಗಳೂ ಪರಸ್ಪರ ಪ್ರೀತಿಸಿ ಎಂದೇ ಹೇಳಿಕೊಡುತ್ತವೆ. ದ್ವೇಷಿಸಿ ಅಂತ ಹೇಳಿಕೊಡುವುದಿಲ್ಲ. ಎಲ್ಲರನ್ನೂ ಪ್ರೀತಿಸುವ ಕೆಲಸವನ್ನು ಸಿದ್ದರಾಮನಂದ ಸ್ವಾಮೀಜಿ ‌ ಮಾಡಿದ್ದರು. ಶಿಕ್ಷಣ ಹಾಗೂ ಅಧ್ಯಾತ್ಮದ ಮೂಲಕ ಜಾತ್ಯತೀತ ಮನೋಭಾವ ಬೆಳೆಸುವ ಕೆಲಸ ಮಾಡಿದ್ದಾರೆ’ ಎಂದರು.

ADVERTISEMENT

‘ಮಾನವನದು ಒಂದೇ ಕುಲ. ಕುಲಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ಇವನಾರವ ಇವನಾರವ ಎಂದಿನಿಸದಿರಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಕನಕದಾಸರು, ಬಸವಣ್ಣ ಹೇಳಿದ್ದು ಒಂದೇ’ ಎಂದು ಹೇಳಿದರು.

‘ಶ್ರೀಗಳು ಸಾವನ್ನಪ್ಪಿದ ದಿನ ನನಗೆ ವಿಪರೀತ ಜ್ವರ ಇತ್ತು, ಪ್ರಯಾಣ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಭೈರತಿ ಸುರೇಶ್ ಅವರನ್ನು ಕಳಿಸಿದ್ದೆ. ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ’ ಎಂದು ತಿಳಿಸಿದರು.

‘ಕಾಗಿನೆಲೆ ಗುರುಪೀಠವನ್ನು 1992 ನವೆಂಬರ್ 9 ರಂದು ಪ್ರಾರಂಭ ಮಾಡಿದ್ದೆವು. ತಾರಕಾನಂದ ಸ್ವಾಮೀಜಿ ಮೊದಲ ಗುರುಗಳಾಗಿದ್ದರು. ಅವರ ನಂತರ ನಾಲ್ಕು ವಿಭಾಗಗಳಲ್ಲಿ ಕನಕಗುರು ಪೀಠ ಪ್ರಾರಂಭ ಮಾಡಿದೆವು. ಇದು ಜಾತ್ಯತೀತ ಮಠ ಆಗಬೇಕು ಎಂಬುದು ನಮ್ಮ ನಿರ್ಧಾರವಾಗಿತ್ತು’ ಎಂದು ಹೇಳಿದರು.

‘ಬುದ್ಧನ ಕಾಲದಲ್ಲಿ ಸಹ ಸಮಾಜ ಜಾತ್ಯತೀತ ಆಗಬೇಕು ಎಂದು ಹೋರಾಟ ಮಾಡಲಾಗಿತ್ತು. ಆದರೆ, ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಸಾಮಾಜಿಕ ನ್ಯಾಯದ ರಥವನ್ನು ಎಳೆದು ತಂದಿದ್ದೇನೆ. ಸಾಧ್ಯ ಆದರೆ ಮುಂದಕ್ಕೆ ಎಳೆಯಿರಿ, ಹಿಂದಕ್ಕೆ ಬೇಡ’ ಎಂದು ಮನವಿ ಮಾಡಿದರು.


ಶಿಕ್ಷಣದಿಂದ ಉದ್ಧಾರ:  ‘ಶಿಕ್ಷಣ ವಂಚಿತರಿಗೆ ಶಿಕ್ಷಣ ಲಭಿಸಿದರೆ ಮಾತ್ರ ಉದ್ದಾರವಾಗುತ್ತಾರೆ. ಗುಲಾಮಗಿರಿ ಮನಸ್ಥಿತಿ ಕಿತ್ತೊಗೆಯಬೇಕು. ಸ್ವಾತಂತ್ರ್ಯ ಬಂದಾಗ ನಮ್ಮ ಶಿಕ್ಷಣ ಶೇಕಡ 18ರಷ್ಷು ಇತ್ತು. ಈಗ ಶೇಕಡ 76 ರಷ್ಟು ಆಗಿದೆ. ಆದರೂ ಜಾತಿ ವ್ಯವ್ಸಸ್ಥೆ ಹೋಗಿಲ್ಲ. ಸಾಮಾಜಿಕ ಆರ್ಥಿಕ ಬದಲಾವಣೆ ಆದಾಗ ಮಾತ್ರ ಜಾತಿ ವ್ಯವಸ್ಥೆ ಬದಲಾಗಲು ಸಾಧ್ಯ’ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವರಿ ಸಚಿವ ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್ ಬೋಸರಾಜು, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಪಾಟೀಲ ದರ್ಶನಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಶಾಸಕರಾದ ಬಿ.ಬಿ ಚಿಮ್ಮನಕಟ್ಟಿ, ರಾಘವೇಂದ್ರ ಹಿಟ್ನಾಳ, ಬನಸಗೌಡ ದದ್ದಲ, ಬಸವರಾಜ ತುರುವಿಹಾಳ, ದೊಡ್ಡನಗೌಡ ಪಾಟೀಲ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ಶಿವನಗೌಡ ನಾಯಕ, ಪ್ರತಾಪಗೌಡ ಪಾಟೀಲ, ರಾಜ್ಯ ಕುರುಬ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಿದಾನಂದ ಗುರುವಿನ ಹಾಗೂ ನಿಕೇತರಾಜ್ ಮೌರ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.