ADVERTISEMENT

ರಾಯಚೂರು: ಕುಡಿಯುವ ನೀರಿನ ಕಾಮಗಾರಿಗೆ ಹಗ್ಗಜಗ್ಗಾಟ

ಸದಸ್ಯರ ವಾಗ್ವಾದರಿಂದ ಗೊಂದಲದ ಗೂಡಾದ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 14:25 IST
Last Updated 30 ಏಪ್ರಿಲ್ 2022, 14:25 IST
ರಾಯಚೂರು ನಗರಸಭೆ ಅಧ್ಯಕ್ಷೆ ಲಲಿತಾ ಆಂಜಿನೇಯ್ಯ ಕಡಗೋಲ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಶನಿವಾರ ಸಾಮಾನ್ಯಸಭೆ ನಡೆಯಿತು. ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಪೌರಾಯುಕ್ತ ಕೆ.ಮುನಿಸ್ವಾಮಿ ಇದ್ದರು.
ರಾಯಚೂರು ನಗರಸಭೆ ಅಧ್ಯಕ್ಷೆ ಲಲಿತಾ ಆಂಜಿನೇಯ್ಯ ಕಡಗೋಲ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಶನಿವಾರ ಸಾಮಾನ್ಯಸಭೆ ನಡೆಯಿತು. ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಪೌರಾಯುಕ್ತ ಕೆ.ಮುನಿಸ್ವಾಮಿ ಇದ್ದರು.   

ರಾಯಚೂರು: ಕುಡಿಯುವ ನೀರು ಸರಬರಾಜು ಮಾಡುವ ಮೋಟರ್‌ ಪಂಪ್‌ ದುರಸ್ತಿ ಹಾಗೂ ಮುಂಜಾಗ್ರತಾ ಕ್ರಮ ವಹಿಸುವುದಕ್ಕೆ ಪೂರ್ವಭಾವಿಯಾಗಿ ವೆಚ್ಚದ ಅಂದಾಜು ಮಾಡಿದ ಕಡತಕ್ಕೆ ಅನುಮೋದನೆ ನೀಡುವ ವಿಷಯ ರಾಯಚೂರು ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಸದಸ್ಯರ ಹಗ್ಗಜಗ್ಗಾಟಕ್ಕೆ ಎಡೆಮಾಡಿಕೊಟ್ಟಿತು.

ಕಾಂಗ್ರೆಸ್‌ ಸದಸ್ಯರು ಪ್ರಸ್ತಾವನೆಯನ್ನು ಒಟ್ಟಾಗಿ ವಿರೋಧಿಸಿದ್ದರಿಂದ ಬಿಜೆಪಿ ಸದಸ್ಯರು ಇದಕ್ಕೆ ಪ್ರತಿಯಾಗಿ ಸಭೆಯಲ್ಲಿ ಮಾತನಾಡಿದರು.

ಕುಡಿಯುವ ನೀರಿನ ಸರಬರಾಜಿನಲ್ಲಿರುವ ಸಮಸ್ಯೆ ಪರಿಹಾರ ಮಾಡುವುದಕ್ಕೆ ಚೆನ್ನೈನ ವೋಲ್‌ಟೆಕ್‌ ಸಂಸ್ಥೆಗೆ ವಹಿಸಬೇಕಿದೆ. ನೀರು ಪೂರೈಕೆ ಸರಿಪಡಿಸುವುದಕ್ಕೆ ಸದಸ್ಯರು ಸಹಕರಿಸಬೇಕು ಎಂದು ಬಿಜೆಪಿ ಸದಸ್ಯರಾದ ಶಶಿರಾಜ, ನಾಗರಾಜ, ಶರಣಬಸವ ಮತ್ತಿತರರು ಮಾತನಾಡಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ಮಾತನಾಡಿದ ಕಾಂಗ್ರೆಸ್‌ ಸದಸ್ಯರಾದ ಜಯಣ್ಣ, ಬಸವರಾಜ, ಶ್ರೀನಿವಾಸರೆಡ್ಡಿ, ಜಿಂದಪ್ಪ ಅವರು, ದುರಸ್ತಿ ಕಾರ್ಯ ಮಾಡುವುದಕ್ಕೆ ಟೆಂಡರ್‌ ಆಹ್ವಾನಿಸುವ ಮೊದಲೇ ಅಂದಾಜು ಪಟ್ಟಿಗೆ ಏಕೆ ಅನುಮೋದನೆ ಪಡೆಯುತ್ತಿದ್ದೀರಿ. ಇದರಿಂದ ಹಣ ಲೂಟಿ ಮಾಡುವುದಕ್ಕೆ ಸಭೆಯೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಚೈನ್ನೈ ಕಂಪೆನಿಯು ಸಲ್ಲಿಸಿರುವ ಅಂದಾಜು ಪಟ್ಟಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಬಳಿಕವೇ ಅನುಮೋದನೆ ನೀಡಲಾಗುವುದು ಎಂದರು.

ಎಡಿಬಿಗೆ ವಹಿಸಿದ್ದ ಕುಡಿಯುವ ನೀರಿನ ಕಾಮಗಾರಿ ಇನ್ನೂ ಹಸ್ತಾಂತರವೇ ಆಗಿಲ್ಲ. ಈ ಹಂತದಲ್ಲಿ ಬೇರೆವರಿಗೆ ಕಾಮಗಾರಿ ವಹಿಸುವುದಕ್ಕೆ ಕಾನೂನಿನಲ್ಲಿ ತೊಡಕಿದೆ. ದುರಸ್ತಿ ಕಾರ್ಯಕ್ಕಾಗಿ ಎಡಿಬಿಯಿಂದ ಈಗಾಗಲೇ ₹21 ಲಕ್ಷ ನೀಡಲಾಗಿದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸುವುದಕ್ಕೆ ಮತ್ತೊಮ್ಮೆ ತುರ್ತು ಸಭೆ ಆಯೋಜಿಸಬೇಕು ಎಂದು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು.

ಇದೇ ಸಭೆಯಲ್ಲಿ ಅನುಮೋದನೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರೂ ಸ್ಪಂದನೆ ಸಿಗದ ಕಾರಣ, ಮತ್ತೊಮ್ಮೆ ವಿಶೇಷ ಸಭೆ ಆಯೋಜಿಸುವುದಕ್ಕೆ ಎಲ್ಲರೂ ಒಪ್ಪಿಕೊಂಡರು.

ಸದಸ್ಯ ಶಶಿರಾಜ ಮಾತನಾಡಿ, ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ 228 ಕಡತಗಳ ಕುರಿತು ಚರ್ಚಿಸಲಾಗಿತ್ತು. ಆದರೆ, 130 ಕಡತಗಳು ಲಭ್ಯವೇ ಇಲ್ಲ ಎಂದು ತಾಂತ್ರಿಕ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಕಡತಗಳು ಎಲ್ಲಿವೇ ಎಂಬುದನ್ನು ಸಭೆಗೆ ತಿಳಿಸಬೇಕು ಎಂದರು.

ನಗರಸಭೆ ನಿಕಟಪೂರ್ವ ಅಧ್ಯಕ್ಷ ಇ.ವಿನಯಕುಮಾರ್‌ ಮಾತನಾಡಿ, ಕಡತಗಳ ಕುರಿತು ಉಮಾ ಜಲ್ದಾರ್‌ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಕಡತಗಳೆಲ್ಲವೂ ತುರ್ತು ಕಾಮಗಾರಿಗಳಿಗೆ ಸಂಬಂಧಿಸಿದ್ದವು. ಹೀಗಾಗಿ ಪ್ರತಿ ವಾರ್ಡ್‌ನಲ್ಲೂ ಅನುದಾನ ಲಭ್ಯತೆ ನೋಡಿಕೊಂಡು ₹5 ಲಕ್ಷ ಮೊತ್ತದ ಕಾಮಗಾರಿ ಕೈಗೊಳ್ಳುವುದಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು ಎಂದರು.

ಕಡತಗಳು ಎಲ್ಲಿವೆ ಎಂಬುದರ ಬಗ್ಗೆ ಸಭೆಗೆ ಮಾಹಿತಿ ನೀಡಬೇಕು ಕೆಲವು ಸದಸ್ಯರು ಒತ್ತಾಯಿಸಿದರು. ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ಈ ಹಿಂದೆ ನಡೆದ ಸಾಮಾನ್ಯ ಸಭೆಗೆ ಹಾಜರಾಗದ ಸದಸ್ಯರು ಈ ಬಗ್ಗೆ ಪ್ರಸ್ತಾಪಿಸುವುದಕ್ಕೆ ಅವಕಾಶವಿಲ್ಲ ಎಂದರು.

ಸದಸ್ಯರ ಮತ್ತೆ ವಾಗ್ವಾದ ಶುರುವಾಗಿದ್ದರಿಂದ ಸಭೆಯಲ್ಲಿ ವಿಷಯಸೂಚಿ ಪ್ರಕಾರ ಚರ್ಚೆ ನಡೆಯದೇ ಗೊಂದಲ ನಿರ್ಮಾಣವಾಯಿತು. ಈ ಮಧ್ಯೆ ಕೆಲವು ಕಡೆ ಪುತ್ಥಳಿ ನಿರ್ಮಾಣಕ್ಕೆ ಅನುಮೋದನೆ ಪಡೆದುಕೊಳ್ಳಲಾಯಿತು.

ನಗರಸಭೆ ಸದಸ್ಯೆ ಲಲಿತಾ ಆಂಜಿನೇಯ್ಯ ಕಡಗೋಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಪೌರಾಯುಕ್ತ ಕೆ.ಮುನಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.