ADVERTISEMENT

ಕೈ ತೊಳೆದು ಒಳಗೆ ಬನ್ನಿ!

ರಾಯಚೂರು ಕೃಷಿ ಮಹಾವಿದ್ಯಾಲಯ ದ್ವಾರದ ಬಳಿ ವ್ಯವಸ್ಥೆ

ನಾಗರಾಜ ಚಿನಗುಂಡಿ
Published 18 ಮಾರ್ಚ್ 2020, 19:45 IST
Last Updated 18 ಮಾರ್ಚ್ 2020, 19:45 IST
ರಾಯಚೂರಿನ ಕೃಷಿ ಮಹಾವಿದ್ಯಾಲಯದೊಳಗೆ ಹೋಗುವ ಮೊದಲು ಕೈ ತೊಳೆದುಕೊಳ್ಳಬೇಕು
ರಾಯಚೂರಿನ ಕೃಷಿ ಮಹಾವಿದ್ಯಾಲಯದೊಳಗೆ ಹೋಗುವ ಮೊದಲು ಕೈ ತೊಳೆದುಕೊಳ್ಳಬೇಕು   

ರಾಯಚೂರು: ಕೊರೊನಾ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿರುವ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು, ಕೈ ತೊಳೆಯುವುದಕ್ಕೆ ಸರಳವಾದ ವ್ಯವಸ್ಥೆಯೊಂದನ್ನು ಜಾರಿಮಾಡಿದೆ.

ಕೃಷಿ ಮಹಾವಿದ್ಯಾಲಯದ ಪ್ರದೇಶದ್ವಾರದ ಪಕ್ಕದಲ್ಲಿ ಹ್ಯಾಂಡ್‌ವಾಷ್‌ ಸಹಿತ ನೀರಿನ ನಲ್ಲಿ ಇರಿಸಲಾಗಿದೆ. ಮಹಾವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಾರ್ವಜನಿಕರು ಹಾಗೂ ಸಿಬ್ಬಂದಿ ಎಲ್ಲರೂ ಪ್ರವೇಶದ್ವಾರದ ಪಕ್ಕದಲ್ಲಿ ಮೊದಲು ಹ್ಯಾಂಡ್‌ವಾಷ್‌ ಉಪಯೋಗಿಸಿಕೊಂಡು ಕೈ ತೊಳೆದುಕೊಳ್ಳಬೇಕು. ಇದರ ಮೇಲೆ ‘ಕೈ ತೊಳೆದು ಒಳಗೆ ಬನ್ನಿ’ ಎನ್ನುವ ಸೌಜನ್ಯದ ಸೂಚನೆಯೊಂದನ್ನು ಬರೆದಿರುವುದು ಗಮನ ಸೆಳೆಯುತ್ತಿದೆ.

‘ಕೈ ಮುಗಿದು ಒಳಗೆ ಬನ್ನಿ’ ಎನ್ನುವ ಬರಹವನ್ನು ದೇವಸ್ಥಾನ, ಶಿಕ್ಷಣ ಸಂಸ್ಥೆ ಕಟ್ಟಡಗಳ ಮೇಲೆ ಹಾಕಿರುವುದು ಸಾಮಾನ್ಯವಾಗಿದೆ. ಆದರೆ, ಕೊರೊನಾ ವೈರಸ್‌ ಎನ್ನುವ ಕಣ್ಣಿಗೆ ಕಾಣದ ಸೋಂಕಿನ ವಿರುದ್ಧ ಹೋರಾಡಲು ಶುಚಿತ್ವ ಕಾಪಾಡಬೇಕಿದ್ದು, ಕೈತೊಳೆಯುವುದು ಅನಿವಾರ್ಯ ಎಂದಾಗಿದೆ. ಇದಕ್ಕಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಎಲ್ಲರ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ವ್ಯವಸ್ಥೆ ಮಾಡಿರುವುದು ಬೇರೆ ಶಿಕ್ಷಣ ಸಂಸ್ಥೆಗಳು ಹಾಗೂ ಕಚೇರಿಗಳಿಗೆ ಅನುಕರಣೀಯ ಮಾದರಿಯಂತಿದೆ.

ADVERTISEMENT

‘ಕೊರೊನಾ ವೈರಸ್‌ ಸೋಂಕಿನಿಂದ ತಪ್ಪಿಸಿಕೊಳ್ಳಲು ಕೈಗಳನ್ನು ಮೇಲಿಂದ ಮೇಲೆ ತೊಳೆದುಕೊಂಡು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸರ್ಕಾರವೇ ಪ್ರಚಾರ ಮಾಡುತ್ತಿದೆ. ಕೃಷಿ ವಿಶ್ವವಿದ್ಯಾಲಯದ ಕಟ್ಟಡಗಳ ಒಳಭಾಗದಲ್ಲಿ ಶೌಚಾಲಯ ಹಾಗೂ ಕೈತೊಳೆದುಕೊಳ್ಳುವ ವ್ಯವಸ್ಥೆ ಇದೆ. ಆದರೆ, ಕಟ್ಟಡದ ಒಳಗೆ ಬರುವ ಜನರು ಎದುರಿಗೆ ಬರುವವರಿಗೆ ಹಸ್ತ ಲಾಘವ ಮಾಡುತ್ತಾರೆ. ಗೋಡೆ, ಕಿಟಕಿ ಸೇರಿ ಅನೇಕ ವಸ್ತುಗಳನ್ನು ಸ್ಪರ್ಶಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಗಮನದಲ್ಲಿಕೊಂಡು ಯೋಚಿಸಿ, ಯೋಜಿಸಿ ಪ್ರವೇಶದ್ವಾರದಲ್ಲಿಯೇ ಕೈ ತೊಳೆಯುವ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಒಂದು ಹಂತದಲ್ಲಿ ಸೋಂಕು ಮುಕ್ತರಾಗುವುದನ್ನು ಸಾಧ್ಯ’ ಎಂದು ಮಹಾವಿದ್ಯಾಲಯದ ಡೀನ್‌ ಡಾ.ಡಿ.ಎಂ.ಚಂದರಗಿ ಹೇಳಿದರು.

‘ಕೈ ತೊಳೆದುಕೊಳ್ಳುವುದಕ್ಕೆ ಬಳಸುವ ನೀರು ಹಾಳಾಗುವುದಿಲ್ಲ. ಅದು ಉದ್ಯಾನದ ಸಸಿಗಳಿಗೆ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ಹ್ಯಾಂಡ್‌ವಾಷ್‌ ಬೇರೆ ಕಡೆಗೆ ತೆಗೆದಿಟ್ಟು, ಬೆಳಿಗ್ಗೆ 9 ಕ್ಕೆ ಮತ್ತೆ ಅದೇ ಸ್ಥಾನದಲ್ಲಿ ಇಡುವುದಕ್ಕೆ ವಿದ್ಯಾರ್ಥಿಗಳಿಗೆ ಇನ್‌ಚಾರ್ಜ್‌ ಮಾಡಲಾಗಿದೆ. ಅದು ಸಲೀಸಾಗಿ ಮುಂದುವರಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.