ರಾಯಚೂರು: ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969, ಉಪನಿಯಮ 3ರಡಿ ಜಿಲ್ಲೆಯಲ್ಲಿ ಹಂಚಿಕೆಗೆ ಲಭ್ಯವಿರುವ ಭೂಮಿ ವಿವರವನ್ನು ಕೂಡಲೇ ಪ್ರಕಟಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ( ಕೆಆರ್ ಎಸ್) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು-1969, ಉಪನಿಯಮ 3ರ ಅನ್ವಯ ತಹಶೀಲ್ದಾದಾರರು ಪ್ರತಿ ವರ್ಷವೂ ಹಂಚಿಕೆಗೆ ಜಿಲ್ಲೆಯಲ್ಲಿ ಲಭ್ಯ ಇರುವ ಸರ್ಕಾರಿ ಭೂಮಿಯ ಪಟ್ಟಿಯನ್ನು ಪ್ರತಿ ವರ್ಷ ಜುಲೈ 1ನೇ ತಾರಿಖು ಮೀರದಂತೆ ಪ್ರಕಟಿಸಬೇಕಾಗುತ್ತದೆ. ಈ ಮಹತ್ವದ ಕೆಲಸವನ್ನು ಕೈಗೆತ್ತಿಕೊಂಡು ಸಕಾಲದಲ್ಲಿ ಜಿಲ್ಲೆಯಲ್ಲಿ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ದುರ್ಬಲ ಸಮುದಾಯಗಳಿಗೆ ಹಂಚಲು ಲಭ್ಯ ಇರುವ ಸರ್ಕಾರಿ ಭೂಮಿಯ ವಿವರವನ್ನು ಈವರೆಗೂ ಪ್ರಕಟಿಸಿದೇ ಅಧಿಕಾರಿಗಳು ಕರ್ತವ್ಯ ಚ್ಯುತಿ ಎಸಗಿ ಭೂರಹಿತರ ಹಕ್ಕುಗಳಿಗೆ ವಂಚನೆ ಮಾಡಿದ್ದಾರೆ ಎಂದು ದೂರಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಸಾಗುವಳಿ ಭೂಮಿಯಿಂದ ವಂಚಿತರಾದ ದಲಿತ ಹಾಗೂ ದುರ್ಬಲ ಸಮುದಾಯಗಳಿಗೆ ಭೂಮಿ ನೀಡುವ ಸರ್ಕಾರದ ಮಹತ್ವಕಾಂಕ್ಷಿಯಾದ ಎಲ್ಲ ಯೋಜನೆಗಳ ಮೇಲೆ ಇದರ ಅಡ್ಡ ಪರಿಣಾಮವಾಗಿದೆ. ಕೂಡಲೇ 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹಂಚಿಕೆ ಮಾಡಲು ಲಭ್ಯ ಇರುವ ಒಟ್ಟು ಸರ್ಕಾರಿ ಭೂಮಿಯ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಮತ್ತು ಅದರ ದೃಢೀಕೃತ ಪ್ರತಿಯನ್ನು ಸಂಘಟನೆಯ ಮುಖಂಡರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಸೈಯದ್ ಅಬ್ಬಾಸಲಿ, ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ, ಏ.ಗಿರಲಿಂಗ ಸ್ವಾಮಿ, ಸಾದೀಕ್ ಪಾಷಾ, ಯಂಕಪ್ಪ ದೊರೆ, ಮಲ್ಲೇಶ ಕೋಳೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.