ADVERTISEMENT

ವಿಚಾರ ಸಂಕಿರಣ: ವಿ.ವಿಗಳಲ್ಲೇ ಹಳಗನ್ನಡ ಕೈಬಿಡುವ ಯತ್ನ - ಚಂದ್ರಶೇಖರ ವಸ್ತ್ರದ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 23:24 IST
Last Updated 21 ಫೆಬ್ರುವರಿ 2026, 23:24 IST
ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳಗನ್ನಡ ಸಾಹಿತ್ಯ ಪರಂಪರೆ ರಾಜ್ಯಮಟ್ಟದ ವಿಚಾರ ಸಂಕಿರಣ ಸಮಾರಂಭವನ್ನು ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಉದ್ಘಾಟಿಸಿದರು
ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳಗನ್ನಡ ಸಾಹಿತ್ಯ ಪರಂಪರೆ ರಾಜ್ಯಮಟ್ಟದ ವಿಚಾರ ಸಂಕಿರಣ ಸಮಾರಂಭವನ್ನು ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಉದ್ಘಾಟಿಸಿದರು    

ಲಿಂಗಸುಗೂರು: ‘ಹಳಗನ್ನಡ ಸಾಹಿತ್ಯದಲ್ಲಿ ಭಾಷೆಯ ಅಪಾರ ಸಂಪತ್ತು ಅಡಗಿದೆ. ಆದರೆ ಇತ್ತೀಚಿಗೆ ವಿಶ್ವವಿದ್ಯಾಲಯಗಳಲ್ಲೇ ಹಳಗನ್ನಡ ಸಾಹಿತ್ಯವನ್ನು ಕೈಬಿಡುವ ಯತ್ನ ನಡೆದಿರುವುದು ಕಳವಳಕಾರಿಯಾಗಿದೆ’ ಎಂದು ಗದಗ ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಯೋಗದಲ್ಲಿ ಶನಿವಾರ ನಡೆದ ಹಳಗನ್ನಡ ಸಾಹಿತ್ಯ ಪರಂಪರೆ ರಾಜ್ಯಮಟ್ಟದ ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಳಗನ್ನಡ ಸಾಹಿತ್ಯವನ್ನು ಓದಿದಾಗ ಹೊಸಹೊಸ ಪದಗಳ ಜತೆಗೆ ಆ ಪದಗಳ ಮಹತ್ವ, ಹಳಗನ್ನಡದ ಸೊಗಡು, ಪರಂಪರೆ ತಿಳಿಯುತ್ತದೆ, ಈ ಕುರಿತು ತಿಳಿಸಬೇಕಾದ ವಿಶ್ವವಿದ್ಯಾಲಯಗಳಲ್ಲಿ ಹಳಗನ್ನಡವನ್ನು ನಿಧಾನವಾಗಿ ಕೈಬಿಡುವ ಯತ್ನ ನಡೆದಿದೆ, ಹಳಗನ್ನಡ ಶಬ್ದಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಹಳಗನ್ನಡದ ಬಗ್ಗೆ ಯುವ ಸಮೂಹ ಆಸಕ್ತಿ ಬೆಳೆಸಿಕೊಂಡು ಅದನ್ನು ಉಳಿಸಿ ಬೆಳಸಬೇಕಾಗಿದೆ ಎಂದರು.

ADVERTISEMENT

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರೂಪಣ್ಣ ಕಲ್ಲೂರು ಮಾತನಾಡಿ, ‘ರಾಜ್ಯದಲ್ಲಿ ಶಿಕ್ಷಕರ ಕೊರತೆ, ಶಾಲಾ ಕೊಠಡಿ ಸೇರಿ ಹಲವು ಮೂಲಸೌಕರ್ಯಗಳ ಕೊರತೆಯಿಂದ 3700 ಶಾಲೆಗಳು ಮುಚ್ಚಿವೆ. ಸರ್ಕಾರ ಇದೇ ಧೋರಣೆ ಮುಂದುವರಿಸಿದರೆ ಮತ್ತಷ್ಟು ಶಾಲೆಗಳು ಮುಚ್ಚುವ ಸ್ಥಿತಿಗೆ ಬರಲಿವೆ. ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದಾರೆ’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವೆಂಕಟನಾರಾಯಣ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ನರಸಿಂಗರಾವ್ ಸರ್ಕಿಲ್, ಕಾಲೇಜು ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ನಿಂಗಣ್ಣ ದೇವಿಕೇರಿ, ನಾರಾಯಣಪ್ಪ ನಾಯ್ಕ, ಪರಶುರಾಮ ಕೆಂಭಾವಿ, ರಾಜು ತಂಬಾಕೆ, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಕೆಂಭಾವಿ, ಉಪನ್ಯಾಸಕರಾದ ಡಾ.ಹನುಮಂತಪ್ಪ, ಗಣೇಶ ದರ್ಬಿ, ಅಂಜನೇಯ, ಶಂಕರಗೌಡ, ಚುಸಾಪ ತಾಲ್ಲೂಕು ಅಧ್ಯಕ್ಷ ದುರ್ಗಾಸಿಂಗ್ ರಜಪೂತ ಹಾಗೂ ಇನ್ನಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.