ADVERTISEMENT

ನಿರ್ವಾಹಕನ ಮಗನಿಗೆ ಒಲಿದ ಐಎಫ್‌ಎಸ್ ಹುದ್ದೆ: ಆನಂದಕುಮಾರ್‌ಗೆ 41ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:22 IST
Last Updated 21 ಮೇ 2025, 13:22 IST
ಆನಂದಕುಮಾರ
ಆನಂದಕುಮಾರ   

ಲಿಂಗಸುಗೂರು: ತಾಲ್ಲೂಕಿನ ಕರಡಕಲ್ ಗ್ರಾಮದ ಆನಂದಕುಮಾರ ನಾಗರಾಳ ಅವರು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆಯಲ್ಲಿ ದೇಶಕ್ಕೆ 41ನೇ ರ‍್ಯಾಂಕ್‌ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಅವರ ತಂದೆ ಬಸವರಾಜ ಅವರು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಟೇಲರಿಂಗ್ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಆನಂದಕುಮಾರ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು.

ಅವರು ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಗೆ ಪ್ರವೇಶ ಪಡೆದು, 10ನೇ ತರಗತಿವರೆಗೆ ಓದಿ ಮುಂದೆ ಪಿಯುಸಿಯನ್ನು ಬಳ್ಳಾರಿಯಲ್ಲಿ ಹಾಗೂ ಬಿ.ಎಸ್‌ಸಿ, ಎಂ.ಎಸ್‌ಸಿಯನ್ನು ಧಾರವಾಡದಲ್ಲಿ ಪೂರ್ಣಗೊಳಿಸಿದ್ದಾರೆ.

ADVERTISEMENT

ಮೂರನೇ ಪ್ರಯತ್ನದಲ್ಲಿ ಸಾಧನೆ: ಯುಪಿಎಸ್‌ಸಿ ಪರೀಕ್ಷೆಗೆ ದೆಹಲಿ, ಬೆಂಗಳೂರಿನಲ್ಲಿ ಕೋಚಿಂಗ್ ಪಡೆದುಕೊಂಡು ಮೇನ್ಸ್‌ವರೆಗೂ ಹೋಗಿದ್ದರೂ ಐಎಎಸ್ ಆಸೆ ಕೈಗೂಡಿರಲಿಲ್ಲ. ಐಎಫ್ಎಸ್‌ ಪರೀಕ್ಷೆಯಲ್ಲಿ ಎರಡು ಪ್ರಯತ್ನದಲ್ಲಿ ವಿಫಲವಾದರೂ ಮತ್ತೆ ಕಠಿಣ ಪರಿಶ್ರಮದ ಮೂಲಕ ಮೂರನೇ ಪ್ರಯತ್ನದಲ್ಲಿ ದೇಶಕ್ಕೆ 41ನೇ ರ‍್ಯಾಂಕ್‌ ಗಳಿಸುವ ಮೂಲಕ ಆನಂದಕುಮಾರ ಗುರಿ ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.