ADVERTISEMENT

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಆರ್. ಬಸನಗೌಡ

ಸಂತೆಕೆಲ್ಲೂರ: ಅಭಿನಂದನಾ ಸಮಾರಂಭದಲ್ಲಿ ಶಾಸಕ ಆರ್. ಬಸನಗೌಡ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 12:13 IST
Last Updated 30 ಜುಲೈ 2021, 12:13 IST
ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು 
ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು    

ಮಸ್ಕಿ: ‘ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿಯವರ ಯಾವುದೇ ಆಸೆ ಆಮೇಷಗಳಿಗೆ ಒಳಗಾಗದೇ ನನ್ನನ್ನು 30 ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಆಯ್ಕೆ ಮಾಡಿದ್ದಾರೆ. ಇದು ಕ್ಷೇತ್ರದ ಸ್ವಾಭಿಮಾನಿ ಮತದಾರರ ಗೆಲುವಾಗಿದೆ’ ಎಂದು ಶಾಸಕ ಆರ್. ಬಸನಗೌಡ ಹೇಳಿದರು.

ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಣದ ಹೊಳೆಯನ್ನೆ ಹರಿಸಿತು.‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡರು. ಆದರೆ, ಕ್ಷೇತ್ರದ ಮತದಾರರು ಇವುಗಳಿಗೆ ಮನ್ನಣೆ ಕೊಡದೆ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ‘ ಎಂದರು.

‘ಕ್ಷೇತ್ರದ ಮತದಾರರು ನನ್ನ ಹಾಗೂ ನಮ್ಮ ಪಕ್ಷದ ಮುಖಂಡರ ಮೇಲೆ ಭರವಸೆ ಇಟ್ಟು ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಿದ್ದಾರೆ. ಅವರ ಭರವಸೆಗಳಿಗೆ ಕಪ್ಪು ಚುಕ್ಕೆ ಬಾರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದರು.

ADVERTISEMENT

‘ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸಬೇಕು. 2023 ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲೂ ಸಹ ಮತ್ತೊಮ್ಮೆ ಹೆಚ್ಚಿನ ಮತಗಳಿಂದ ಆಯ್ಕೆ ಮಾಡುವ ಮೂಲಕ ತಮ್ಮ ಶಕ್ತಿ ತೋರಿಸಬೇಕು‘ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮುಂಬರುವ ದಿನಗಳಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಕೆ.ಕರಿಯಪ್ಪ, ಮುಖಂಡರಾದ ಶ್ರೀಶೈಲಪ್ಪ ಬ್ಯಾಳಿ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಮಲ್ಲನಗೌಡ ಹಳ್ಳಿ, ನಿರುಪಾದಿ ವಕೀಲ, ಆದನಗೌಡ ದಳಪತಿ, ಸೋಮಶೇಖರ, ಮೈಬೂಬಸಾಬ, ಮಹೇಂದ್ರಗೌಡ ಕಾರಲಕುಂಟಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ, ವೀರೇಂದ್ರ ಪಾಟೀಲ್, ಮಲ್ಲಪ್ಪ ನಾಗರಬೆಂಚಿ. ರಸೂಲ್ ಮುದಗಲ್, ಮಲ್ಲಯ್ಯ ಬಳ್ಳಾ, ದುರ್ಗೇಶ ಕ್ಯಾತನಟ್ಟಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.