ADVERTISEMENT

ಪ್ರತಿಭಟನಾ ರ್‍ಯಾಲಿ: ಮುಖಂಡರ ಬಂಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:38 IST
Last Updated 1 ನವೆಂಬರ್ 2019, 10:38 IST
ದೇವದುರ್ಗದ ಮುಷ್ಟೂರು ಗ್ರಾಮದಲ್ಲಿ ಪ್ರತಿಭಟನಾ ರ್‍ಯಾಲಿಯನ್ನು ಪೊಲೀಸರು ತಡೆದು, ಮುಖಂಡರನ್ನು ವಶಕ್ಕೆ ಪಡೆದರು
ದೇವದುರ್ಗದ ಮುಷ್ಟೂರು ಗ್ರಾಮದಲ್ಲಿ ಪ್ರತಿಭಟನಾ ರ್‍ಯಾಲಿಯನ್ನು ಪೊಲೀಸರು ತಡೆದು, ಮುಖಂಡರನ್ನು ವಶಕ್ಕೆ ಪಡೆದರು   

ದೇವದುರ್ಗ: ಮುಷ್ಟೂರು– ಅರಕೇರಾ ಮುಖ್ಯ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಷ್ಟೂರು ಗ್ರಾಮದಿಂದ ಅರಕೇರಾವರೆಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್‍ಯಾಲಿಯನ್ನು ಪೊಲೀಸರು ತಡೆದು, ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವುದು ಮತ್ತು ನಾಡ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿತು.

ಬೆಳಗ್ಗೆ ಮುಷ್ಟೂರು ಗ್ರಾಮಕ್ಕೆ ಆಗಮಿಸಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ನಂತರ ಪ್ರತಿಭಟನೆ ರ್‍ಯಾಲಿ ಆರಂಭಕ್ಕೂ ಮುನ್ನ ತಡೆದರು. ಇದಕ್ಕೆ ಆಕ್ರೋಶಗೊಂಡ ಪ್ರತಿಭಟನಾ ನಿರತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪೊಲೀಸರ ವರ್ತನೆ ಖಂಡಿಸಿದರು.

ADVERTISEMENT

ಶಾಂತಿಯುತವಾಗಿ ಅರಕೇರಾ ಗ್ರಾಮಕ್ಕೆ ಹೋಗಿ ನಾಡ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುವುದಾಗಿ ಮುಖಂಡರು ಕೇಳಿಕೊಂಡರು. ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ನೇತೃತ್ವದಲ್ಲಿ ಪ್ರತಿಭಟನಾಕಾರರನ್ನು ಸ್ಥಳದಲ್ಲಿಯೇ ಬಂಧಿಸಿದ ಪೊಲೀಸರು, ವಾಹನದಲ್ಲಿ ಗಬ್ಬೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ನಂತರ ಬಿಡುಗಡೆಗೊಳಿಸಿದರು.

ಬೇಡಿಕೆಗಳು: ಅರಕೇರಾ ಗ್ರಾಮದಿಂದ ಮುಷ್ಟೂರು ಗ್ರಾಮದವರೆಗೂ ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ಅಭಿವೃದ್ಧಿ ಪಡಿಸಬೇಕು. ಮುಷ್ಟೂರು ಗ್ರಾಮದಲ್ಲಿ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ ಸ್ಥಾಪಿಸಬೇಕು. ಈ ಭಾಗದಲ್ಲಿನ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಮಹಿಳಾ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ಮುಖಂಡರಾದ ರಾಜಶೇಖರ ನಾಯಕ, ಅಬ್ದುಲ್ ಅಜೀಜ್ಸಾಬ, ಶರಣಪ್ಪಗೌಡ ಕೊರವಿ, ಶರಣಗೌಡ ಗಣೇಕಲ್, ಲಕ್ಷ್ಮಣ ಜ್ಯೋತಿ, ಶರಣಗೌಡ ಗೌರಂಪೇಟೆ, ಬಿ. ಸತೀಶ, ಮೋನಪ್ಪ ನಾಯಕ ಕ್ಯಾದಿಗೇರಾ, ದುರಗಪ್ಪ ನಾಯಕ ಮಲ್ಲೇದೇವರಗುಡ್ಡ, ಹನುಮಂತಪ್ಪ ಕಾಕರಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.