ADVERTISEMENT

ಪೆಟ್ರೋಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 14:56 IST
Last Updated 11 ಜೂನ್ 2021, 14:56 IST
ರಾಯಚೂರಿನ ಗೋವಿಂದರಾವ್ ಪೆಟ್ರೋಲ್ ಬಂಕ್ ಎದುರುಗಡೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು
ರಾಯಚೂರಿನ ಗೋವಿಂದರಾವ್ ಪೆಟ್ರೋಲ್ ಬಂಕ್ ಎದುರುಗಡೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ನಗರದ ಗಾಂಧಿ ಚೌಕ್ ಬಳಿಯ ಗೋವಿಂದರಾವ್ ಪೆಟ್ರೋಲ್ ಪಂಪ್ ಬಳಿ 'ಪೆಟ್ರೋಲ್‌ 100 ನಾಟ್ ಔಟ್' ಘೋಷ ವಾಕ್ಯದಡಿ ಗುರುವಾರ ಪ್ರತಿಭಟನೆ ನಡೆಸಿದರು.

ಪೆಟ್ರೋಲ್ ಪಂಪ್ ಮುಂದೆ ಪ್ರತಿಭಟನೆ ನಡೆಸಿದ್ದರಿಂದ‌ ಕೆಲಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಪ್ರತಿಭಟನಾನಿರತ ಮುಖಂಡರು 'ಪೆಟ್ರೋಲ್ 100 ನಾಟ್ ಔಟ್ ದೇಶದ ಜನತೆ ಸ್ಟಂಪ್ ಔಟ್‌' ಬಿತ್ತಿ ಪತ್ರ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಎನ್.ಬೋಸರಾಜು ಮಾತನಾಡಿ, ‘ಕೇಂದ್ರ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಯಂತೆ ಕೆಲಸ ಮಾಡದೆ ಯುವಕರ, ರೈತರ, ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಪೆಟ್ರೋಲ್ ದರ ₹100ಗೆ ಏರಿಕೆಯಾಗಿದೆ. ದರ ಏರಿಕೆ ವಿರುದ್ಧ ರಾಜ್ಯದ 5ಸಾವಿರ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದರು.

ADVERTISEMENT

ಜೂನ್ 11ರಿಂದ 15 ರ ವರೆಗೆ ವಿವಿಧೆಡೆ ಬ್ಲಾಕ್ ಕಾಂಗ್ರೆಸ್, ಮಹಿಳಾ‌ ಮೋರ್ಚ, ಹೋಬಳಿ ಮಟ್ಟದಲ್ಲಿಯೂ ಪ್ರತಿಭಟನೆ ಮಾಡಲಾಗುವುದು. ಪೆಟ್ರೋಲ್ ದರವಲ್ಲದೇ ವಿದ್ಯುತ್‌ ದರ 30ಪೈಸೆ ಹೆಚ್ಚು ಮಾಡಿದ್ದು ಖಂಡನೀಯ. ಇದರಿಂದ ಜನ ಸಾಮಾನ್ಯರಿಗೆ, ಮಧ್ಯಮ ವರ್ಗಕ್ಕೆ ಜೀವನ ನಡೆಸಲು ತೀವ್ರ ಸಮಸ್ಯೆಯಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಶಾಸಕರಾದ ಬಸವನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ಡಿ.ಎಸ್.ಹುಲಗೇರಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಕೆಪಿಸಿಸಿ ವಕ್ತಾರ ಎ.ವಸಂತಕುಮಾರ, ಮುಖಂಡರಾದ ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಜಿ.ಶಿವಮೂರ್ತಿ, ರಾಮಣ್ಣ ಇರಬಗೇರಾ, ಶರಣಪ್ಪ ಮೇಟಿ, ರುದ್ರಪ್ಪ ಅಂಗಡಿ, ಆಂಜನೇಯ ಕುರುಬದೊಡ್ಡಿ, ಸುಧೀಂದ್ರ ಜಾಗೀರದಾರ, ಮಲ್ಲಿಕಾರ್ಜುನ ಪಾಟೀಲ, ಪವನ ಪಾಟೀಲ, ಜಿ.ಸುರೇಶ, ಅಸ್ಲಂ ಪಾಷಾ, ಈಶಪ್ಪ ಇದ್ದರು.

ಮಹಿಳಾ ಘಟಕ: ನಗರದ ಜಿಲ್ಲಾ ನ್ಯಾಯಾಲಯದ ಎದುರಿನ ಪೆಟ್ರೋಲ್ ಬಂಕ್‌ನಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಬೆಣ್ಣಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ರಾಮಮಂದಿರದ ಹತ್ತಿರ ರಾಘವೇಂದ್ರ ಪೆಟ್ರೋಲ್ ಬಂಕ್ಸೇರಿದಂತೆ ನಗರದ ವಿವಿಧ ಪೆಟೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.