ADVERTISEMENT

ರಾಯಚೂರು: ಬೂದು ನೀರು ನಿರ್ವಹಣೆಗೆ ಘಟಕ ನಿರ್ಮಾಣ

ಜಲಮೂಲಗಳ ಮಾಲಿನ್ಯ ತಡೆಗೆ ಜಿಲ್ಲಾ ಪಂಚಾಯಿತಿ ಪ್ರಯತ್ನ

ಚಂದ್ರಕಾಂತ ಮಸಾನಿ
Published 1 ಜನವರಿ 2025, 6:10 IST
Last Updated 1 ಜನವರಿ 2025, 6:10 IST
ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಬೂದು ನೀರು ನಿರ್ವಹಣೆ ಘಟಕ ನಿರ್ಮಿಸಲಾಗಿದೆ
ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಬೂದು ನೀರು ನಿರ್ವಹಣೆ ಘಟಕ ನಿರ್ಮಿಸಲಾಗಿದೆ   

ರಾಯಚೂರು: ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೂದು ನೀರು ನಿರ್ವಹಣೆ ಮಾಡಲು ರಾಯಚೂರು ಜಿಲ್ಲೆಯಲ್ಲಿ 15 ಘಟಕಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಪಾತ್ರೆ ಹಾಗೂ ಬಟ್ಟೆ ತೊಳೆದ ನೀರು, ಬಚ್ಚಲು ನೀರು ಸೇರಿದಂತೆ ಗೃಹ ಬಳಕೆ ಬೂದು ನೀರು ಹಳ್ಳಕೊಳ್ಳ ಸೇರಿ ಜಲಮೂಲಗಳು ಮಾಲಿನ್ಯಕ್ಕೊಳಗಾಗುತ್ತಿದೆ. ಜಲ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಬೂದು ನೀರಿನ ಶುದ್ದೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದೆ.

ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಕ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದರ ಹೊರತಾಗಿ ನರೇಗಾ ಮೂಲಕವೂ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಜಿಲ್ಲಾ ಪಂಚಾಯಿತಿಯು ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಮೂರು ಘಟಕಗಳನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದೆ. ಈಗಾಗಲೇ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮೀಕ್ಷೆ ನಡೆಸಿ ಜಿಲ್ಲಾ ಪಂಚಾಯಿತಿಗೆ ವರದಿಗಳನ್ನೂ ಸಲ್ಲಿಸಿದ್ದಾರೆ.

ADVERTISEMENT


₹17.20 ಕೋಟಿ ಅನುದಾನ: ರಾಜ್ಯದಾದ್ಯಂತ 474 ಗ್ರಾಮ ಪಂಚಾಯಿತಿಗಳಲ್ಲಿ ಎರಡು ಹಂತದಲ್ಲಿ ಘಟಕಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಒಟ್ಟು 15 ಗ್ರಾಮ ಪಂಚಾಯಿತಿಗಳಲ್ಲಿ ಘಟಕಗಳಿಗೆ ₹ 17.20 ಕೋಟಿ ಮೊತ್ತದ ಅನುದಾನದಡಿ ಒಟ್ಟು 1196 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ದೇವದುರ್ಗ ತಾಲ್ಲೂಕಿನ ಅಮರಾಪೂರು ಗ್ರಾಮ ಪಂಚಾಯಿತಿಯ ಮುಕ್ಕನಾಳ, ಶಾವಂತಗೇರಾ ಗ್ರಾಮ ಪಂಚಾಯಿತಿಯ ಹಿರೇರಾಯಕುಂಪೆ, ಲಿಂಗಸೂಗೂರು ತಾಲ್ಲೂಕಿನ ಅನ್ವರಿ, ಗೌಡೂರು, ಮಾನ್ವಿ ತಾಲ್ಲೂಕಿನ  ಜಾನೇಕಲ್, ಪೋತ್ನಾಳ ಗ್ರಾಮ ಪಂಚಾಯಿತಿಯ ಖರಾಬದ್ದಿನ್ನಿ, ಮಸ್ಕಿ ತಾಲ್ಲೂಕಿನ ಬಪ್ಪೂರು ಗ್ರಾಮ ಪಂಚಾಯಿತಿಯ ಹಂಪನಾಳ, ಮೆದಿಕಿನಾಳ ಗ್ರಾಮ ಪಂಚಾಯಿತಿಯ ನಾಗರಬೆಂಚಿ, ಸಂತೆಕಲ್ಲೂರು, ರಾಯಚೂರು ತಾಲ್ಲೂಕಿನ ಪೂರತಿಪ್ಲಿ ಗ್ರಾಮ ಪಂಚಾಯಿತಿಯ ಆಲ್ಕೂರು, ಚಂದ್ರಬಂಡಾ ಗ್ರಾಮ ಪಂಚಾಯಿತಿಯ ಕಟ್ಲೇಟೂಕೂರು, ಸಿಂಧನೂರು ತಾಲ್ಲೂಕಿನ ಎಲೆಕೂಡ್ಲಿಗಿ ಗ್ರಾಮ ಪಂಚಾಯಿತಿಯ ಬಸಾಪೂರು, ಗುಂಜಳ್ಳಿ ಗ್ರಾಮ ಪಂಚಾಯಿತಿಯ ಹೊಸಳ್ಳಿ, ಸಿರವಾರ ತಾಲ್ಲೂಕಿನ ಹೀರಾ ಚಾಗಭಾವಿ ಗ್ರಾಮ ಪಂಚಾಯಿತಿ ಬೂದು ನೀರು ನಿರ್ವಹಣೆ ಘಟಕ ನಿರ್ಮಾಣಕ್ಕೆ ಆಯ್ಕೆಯಾಗಿವೆ.

‘ಜಿಲ್ಲಾ ಪಂಚಾಯಿತಿಯಿಂದ ವೈಯಕ್ತಿಕ ಇಂಗು ಗುಂಡಿ 944 ಪೈಕಿ 346 ಕಾಮಗಾರಿಗಳನ್ನು ಮುಕ್ತಾಯಗೊಳಿಸಲಾಗಿದೆ. 598 ಕಾಮಗಾರಿಗಳು ಪ್ರಗತಿಯಲ್ಲಿವೆ‘ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಬಸವರಾಜ ಕೆಸರಟ್ಟಿ ಹೇಳುತ್ತಾರೆ.

ದೇವದುರ್ಗ ತಾಲ್ಲೂಕಿನ ಜಾಲಹಳ್ಖಿಯಲ್ಲಿ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ನಾಲಾ

ಯಾವುದು ಬೂದು ನೀರು?

ಒಬ್ಬ ವ್ಯಕ್ತಿಗೆ ನಿತ್ಯ ಸರಾಸರಿ 60 ಲೀಟರ್ ನೀರು ಅಗತ್ಯ. ನಾಲ್ಕೈದು ಸದಸ್ಯರಿರುವ ಕುಟುಂಬಕ್ಕೆ ದಿನ ನಿತ್ಯದ ಬಳಕೆಗಾಗಿ ಸರಿ ಸುಮಾರು 250-300 ಲೀಟರ್ ನೀರು ಬೇಕಾಗುತ್ತದೆ. ಶೌಚಾಲಯದಲ್ಲಿ ಬಳಸಿದ ನೀರನ್ನು ಕಪ್ಪು ನೀರು ಹಾಗೂ ಇನ್ನುಳಿದ ಗೃಹಬಳಕೆಯಿಂದ ಉತ್ಪತ್ತಿಯಾದ ನೀರನ್ನು ಬೂದು ನೀರು ಎಂದು ವಿಂಗಡಿಸಲಾಗಿದೆ. ಮನೆಗಳ ಬಚ್ಚಲುಗಳಿಂದ ಚರಂಡಿಗಳ ಮೂಲಕ ಹಳ್ಳ ಕರೆ ನದಿಗ ಸೇರಿದಂತೆ ಇತರ ಜಲಮೂಲಗಳಿಗೆ ಸೇರುವ ಮುನ್ನವೇ ಸಂಸ್ಕರಣೆ ಮಾಡುವ ಉದ್ದೇಶದಿಂದ ಬೂದು ನೀರು ನಿರ್ವಹಣೆ ಘಟಕ ಸ್ಥಾಪಿಸಲಾಗುತ್ತಿದೆ. ಇದರಿಂದ ನೀರು ನಿಂತು ಕೊಳಚೆಯಾಗುವುದು ತಪ್ಪಲಿದೆ. ಇದನ್ನು ವೈಜ್ಞಾನಿಕವಾಗಿ ನೀರು ನೆಲದಲ್ಲಿ ಇಂಗಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ‘ಬೂದು ನೀರು ನಿರ್ವಹಣೆ ಘಟಕಗಳ ಮೂಲಕ ದ್ರವ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಜಲ ಮಾಲಿನ್ಯ ತಡೆಯಲು ಸಾಧ್ಯವಾಗಲಿದೆ‘ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡ್ವೆ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.