ADVERTISEMENT

ರಾಯಚೂರು ‌| ಮತ್ತೆ ಐವರಲ್ಲಿ ಕೋವಿಡ್ ದೃಢ

ಮಹಾರಾಷ್ಟ್ರದ ಮುಂಬೈನಿಂದ ಬಂದವರಲ್ಲಿಯೇ ಪಾಸಿಟಿವ್‌

​ಪ್ರಜಾವಾಣಿ ವಾರ್ತೆ
Published 21 ಮೇ 2020, 13:41 IST
Last Updated 21 ಮೇ 2020, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಜಿಲ್ಲೆಯ ವಿವಿಧ ಕಡೆ ಕ್ವಾರಂಟೈನ್‌ನಲ್ಲಿ ಇರಿಸಿರುವ ಮಹಾರಾಷ್ಟ್ರದಿಂದ ಮರಳಿದ ವಲಸೆ ಕಾರ್ಮಿಕರಲ್ಲಿಯೇ ಕೊರೊನಾ ಸೋಂಕು ಪತ್ತೆಯಾಗುವುದು ಮುಂದುವರಿದಿದ್ದು, ಗುರುವಾರ ಮತ್ತೆ ಐದು ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.

ಪಿ–1579 (ವಯಸ್ಸು 33), ಪಿ–1580 (ವಯಸ್ಸು 12), ಪಿ–1581 (ವಯಸ್ಸು 14), ಪಿ–1582 (ವಯಸ್ಸು 32), ಪಿ–1583 (ವಯಸ್ಸು 13) ಇಬ್ಬರು ಬಾಲಕರು, ಓರ್ವ ಬಾಲಕಿ, ಒಬ್ಬರು ಪುರುಷ ಹಾಗೂ ಓರ್ವ ಮಹಿಳೆ ಇದ್ದಾರೆ. ಎಲ್ಲರೂ ಮಹಾರಾಷ್ಟ್ರದ ಮುಂಬೈ ಜಿಲ್ಲೆಯ ವಿಲೆಪಿರ್ಲಾ ಮತ್ತು ಅಂಧೇರಿ ಪ್ರದೇಶಗಳಿಂದ ವಾಪಸಾಗಿದ್ದರು. ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಿದ್ದ ದಿನದಂದು ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್‌ ದೃಢವಾದವರಲ್ಲಿ ಒಂಭತ್ತು ಹೆಣ್ಣುಮಕ್ಕಳು ಮತ್ತು ಏಳು ಗಂಡಸರು ಇದ್ದಾರೆ.

ಹೆಚ್ಚಳವಾದ ಮಾದರಿ ಸಂಗ್ರಹ: ಹೊರರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವವರೆಲ್ಲರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ದೇವದುರ್ಗ ತಾಲ್ಲೂಕಿನಿಂದ 237, ಲಿಂಗಸೂಗೂರು ತಾಲ್ಲೂಕಿನಿಂದ 156, ಮಾನ್ವಿ ತಾಲ್ಲೂಕಿನಿಂದ 132, ಸಿಂಧನೂರು ತಾಲ್ಲೂಕಿನಿಂದ 32 ಮತ್ತು ರಾಯಚೂರು ತಾಲ್ಲೂಕಿನಿಂದ 460 ಸೇರಿ ಗುರುವಾರ ಒಂದೇ ದಿನ ಒಟ್ಟು 1,017 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ADVERTISEMENT

ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ 6,297 ಜನರ ಗಂಟಲಿನ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅವುಗಳಲ್ಲಿ ಇದುವರೆಗೂ 4,008 ವರದಿಗಳು ನೆಗೆಟಿವ್ ಆಗಿವೆ. ರೋಗ ಲಕ್ಷಣಗಳಿಲ್ಲದ ಕಾರಣ 6 ವರದಿಗಳು ತಿರಸ್ಕೃತಗೊಂಡಿವೆ ಮತ್ತು ಇನ್ನೂ 2,273 ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.

ಮತ್ತೆ ಕ್ವಾರಂಟೈನ್‌: ಹೊರ ರಾಜ್ಯಗಳಿಂದ ಜಿಲ್ಲೆಗೆ ಪ್ರತಿದಿನ ಬರುತ್ತಿದ್ದು, ಗುರುವಾರ 405 ಜನರು ಬಂದಿದ್ದು, ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‌ ಇರಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 10,080 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಉಳಿಸಲಾಗಿದೆ. ರಾಯಚೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 5,107, ಸಿಂಧನೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 489, ಮಾನ್ವಿ ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1,589, ದೇವದುರ್ಗ ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1,871 ಹಾಗೂ ಲಿಂಗಸೂಗೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1,024 ಜನರು ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಇದ್ದಾರೆ. ಗುರುವಾರ ಕ್ವಾರಂಟೈನ್‌ ಮುಗಿಸಿಕೊಂಡಿದ್ದ 146 ಜನರು ಸೇರಿ ಒಟ್ಟು 1,061 ಜನರನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ.

ಆಸ್ಪತ್ರೆಗೆ ದಾಖಲು: ಒಪೆಕ್‌ ಆಸ್ಪತ್ರೆಗೆ ಗುರುವಾರ 8 ಮಂದಿಯನ್ನು ಹೊಸದಾಗಿ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ. ಒಟ್ಟು 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.