ADVERTISEMENT

ಕ್ಷೇತ್ರದಾದ್ಯಂತ ಅನ್ನದಾಸೋಹ ಮಾಡುವ ಏಕೈಕ ಶಾಸಕ ಶಿವನಗೌಡ ನಾಯಕ: ಅಮರೇಶ್ವರ ನಾಯಕ

​ಪ್ರಜಾವಾಣಿ ವಾರ್ತೆ
Published 31 ಮೇ 2021, 16:19 IST
Last Updated 31 ಮೇ 2021, 16:19 IST
ದೇವದುರ್ಗ ಪಟ್ಟಣದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕೆ.ಮಹಾದೇವಮ್ಮ ಅನ್ನದಾಸೋಹ ಕೇಂದ್ರವನ್ನು ಸೋಮವಾರ ಉದ್ಘಾಟಿಸಿದರು
ದೇವದುರ್ಗ ಪಟ್ಟಣದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕೆ.ಮಹಾದೇವಮ್ಮ ಅನ್ನದಾಸೋಹ ಕೇಂದ್ರವನ್ನು ಸೋಮವಾರ ಉದ್ಘಾಟಿಸಿದರು   

ದೇವದುರ್ಗ: ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಇಡೀ ವಿಧಾನಸಭಾ ಕ್ಷೇತ್ರದಾದ್ಯಂತ ಅನ್ನದಾನ ಮಾಡುತ್ತಿರುವುದು ರಾಜ್ಯದಲ್ಲಿಯೇ ಪ್ರಥಮ ಮತ್ತು ಶಿವನಗೌಡ ನಾಯಕ ಅವರು ರಾಜಕಾರಣಿಗಳಿಗೆ ಮಾದರಿಯ ಶಾಸಕ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಪೂಜ್ಯ ಅಡವಿಲಿಂಗ ಮಹಾರಾಜರು ಮತ್ತು ಮುಂಡರಗಿ ಶಿವರಾಯ ಸೇರಿ ವಿವಿಧ ಮಠಾಧೀಶರು ಸಮ್ಮುಖದಲ್ಲಿ ‘ಕೆ.ಶಿವನಗೌಡ ನಾಯಕ ಅನ್ನದಾಸೋಹ ಕೇಂದ್ರ’ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಅನ್ನದಾನವು ಪವಿತ್ರವಾದ ದಾನ. ಜಿಲ್ಲೆಯಲ್ಲಿ ಆವರಿಸಿಕೊಂಡಿರುವ ಕೊರೊನಾ ಮಹಾಮಾರಿ ತೊಲಗಿಸಲು ಪ್ರತಿಯೊಬ್ಬ ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಾ ಅವಿರತವಾಗಿ ಕೆಲಸ ಮಾಡುತ್ತಿದೆ. ಜನರು ಸ್ಪಂದಿಸಿ ಸಹಕಾರ ನೀಡಬೇಕು ಎಂದರು.

ADVERTISEMENT

ಶಾಸಕ ಕೆ ಶಿವನಗೌಡ ನಾಯಕ ಮಾತನಾಡಿ, ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆಯ ಪರಿಣಾಮದಿಂದ ಜನರು ತತ್ತರಿಸಿ ಹೋಗಿದ್ದಾರೆ. ದೇವದುರ್ಗ ಕ್ಷೇತ್ರದಾದ್ಯಂತ ಈಗಾಗಲೇ ಪ್ರತಿಯೊಂದು ಆಸ್ಪತ್ರೆಯ ಹೊರ ಮತ್ತು ಒಳ ರೋಗಿಗಳಿಗೆ ಹಾಗೂ ಕೊರೊನಾ ವಾರಿಯರ್ಸ್‌ಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು, ಅಗ್ನಿಶಾಮಕ, ಪೌರಾಡಳಿತ ಸಿಬ್ಬಂದಿ, ಪತ್ರಕರ್ತರು, ಬಡವರು ನಿರ್ಗತಿಕರಿಗೆ ಆಹಾರ ವಿತರಣೆಯನ್ನು ಮೇ 2 ರಿಂದಲೆ ಪ್ರಾರಂಭ ಮಾಡಲಾಗಿದೆ ಎಂದು ಹೇಳಿದರು.

‘ನನ್ನ ತಾಯಿಯ ಆಶಯದಂತೆ ದೇವದುರ್ಗ ಕ್ಷೇತ್ರದ 3.5 ಲಕ್ಷ ಜನರಿಗೆ ಊಟ, ಉಪಹಾರ ಮತ್ತು ಕೋವಿಡ್–19 ರೋಗದಿಂದ ರಕ್ಷಣೆಗಾಗಿ ಮುಖ ಕವಚ ವಿತರಿಸುವ ಕಾರ್ಯ ಆರಂಭಿಸಲಾಗಿದೆ’ ಎಂದು ಸಲಹೆ ನೀಡಿದರು.

‘ಕ್ಷೇತ್ರದಾದ್ಯಂತ ಇರುವ 33 ಗ್ರಾಮಪಂಚಾಯಿತಿಗಳು, ಎರಡು ಪುರಸಭೆಗಳು ಪ್ರತಿ ವಾರ್ಡ್‌ಗಳಿಗೆ ಪಟ್ಟಣದ ಕೆಎಸ್‌ಎನ್ ಅನ್ನದಾಸೋಹ ಕೇಂದ್ರ ವತಿಯಿಂದ 33 ವಾಹನಗಳ ಮೂಲಕ ಆಹಾರ ಸರಬರಾಜು ಮಾಡಲಾಗಿದೆ. ಎರಡು ಪುರಸಭೆಯ ಸುಮಾರು 45 ಕ್ಕೂ ಹೆಚ್ಚು ವಾರ್ಡ್‌ಗಳಿಗೆ ವಾಹನಗಳ ಮೂಲಕ ಉತ್ತಮ ಗುಣಮಟ್ಟದ ಆಹಾರ ಕಳುಹಿಸಲಾಗುವುದು’ ಎಂದು ಹೇಳಿದರು.

‘ಪ್ರತಿದಿನ ವಿವಿಧ ಬಗೆಯ ಆಹಾರದ ಪೋಟ್ಟಣಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸಲಾಗುತ್ತದೆ. ಈಗಾಗಲೇ ನನ್ನ ಅಭಿಮಾನಿ ಬಳಗದ ವತಿಯಿಂದ ಪಕ್ಕದ ತಾಲ್ಲೂಕುಗಳಾದ ಶಹಾಪುರ, ಸುರಪುರ, ಮಾನ್ವಿ, ಲಿಂಗಸುಗೂರು ಮತ್ತು ಕಾರಟಗಿಯಲ್ಲಿ ಅನ್ನದಾಸೋಹವ ನಡೆಯುತ್ತಿದೆ. ನನ್ನ ಈ ಅನ್ನದಾಸೋಹ ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಶ್ರೀಗಳ ಪ್ರೇರಣೆಯಿಂದ ಅನ್ನ ದಾನವನ್ನು ಮಾಡುತ್ತಿದ್ದೇನೆ’ ಎಂದರು.

ತಾಯಿ ಮಹದೇವಮ್ಮ,ಗಬ್ಬೂರಿನ ಬೂದಿಬಸವೇಶ್ವರ ಶಿವಾಚಾರ್ಯರು, ಬಸವ ದೇವರು ಅರಿವಿನ ಮನೆ, ಜೈನುದ್ದಿನ್ ಭಾಷಾ ದರ್ಗಾದ ಶ್ರೀಗಳು, ಜಿಲ್ಲಾಧಿಕಾರಿ ವೆಂಕಟೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಿಂ, ಡಿವೈಎಸ್ಪಿ, ಸಿಪಿಐ ನದಾಫ್, ಎಸ್ಐ ಹನುಮಂತ ಸಣ್ಣಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹನುಮಂತರಾಯ ಕಟ್ಟಿಮನಿ ಹಾಗೂ ಸದಸ್ಯರು, ಬಿಜೆಪಿಯ ಜಿಲ್ಲಾಧ್ಯಕ್ಷ ರಮಾನಂದ, ತಾಲ್ಲೂಕು ಅಧ್ಯಕ್ಷರು, ಕಾರ್ಯಕರ್ತರು, ಹಂಪಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಪ್ರಕಾಶ್ ಜೇರಬಂಡಿ, ಬಸನಗೌಡ ವೆಂಕಟಾಪುರ, ಗೋಪಾಲಕೃಷ್ಣ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.