ADVERTISEMENT

ಕೋವ್ಯಾಕ್ಸಿನ್ ಲಸಿಕೆಗೆ ಅಲೆದಾಟ

ಜಿಲ್ಲೆಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗದ ಲಸಿಕೆ: ಅಭಿಯಾನವೂ ಮಂದಗತಿ

ನಾಗರಾಜ ಚಿನಗುಂಡಿ
Published 4 ಮೇ 2021, 14:49 IST
Last Updated 4 ಮೇ 2021, 14:49 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಜಿಲ್ಲೆಗೆ ಕೋವ್ಯಾಕ್ಸಿನ್‌ ಹಾಗೂ ಕೋವಿಶಿಲ್ಡ್‌ ಲಸಿಕೆಗಳು ಅಗತ್ಯವಿರುವಷ್ಟು ಪೂರೈಕೆ ಆಗುತ್ತಿಲ್ಲ.

ಅದರಲ್ಲೂ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆ ನಿಂತುಹೋಗಿ ಒಂದು ವಾರ ಕಳೆದಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಅಧಿಕಾರಿಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಯು ಜನರಿಗೆ ಈ ಬಗ್ಗೆ ಮನವರಿಕೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಮೊದಲು ಕೋವ್ಯಾಕ್ಸಿನ್‌ ಲಸಿಕೆ ಪಡೆದವರು, ಎರಡನೇ ಬಾರಿಯೂ ಅದೇ ಲಸಿಕೆ ಪಡೆಯುವುದಕ್ಕಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಪ್ರತಿದಿನ ಅಲೆದಾಡುತ್ತಿದ್ದಾರೆ.

ಇದನ್ನೇ ಅವಕಾಶ ಮಾಡಿಕೊಂಡ ಕೆಲವು ಖಾಸಗಿ ಆಸ್ಪತ್ರೆಗಳು ಕೋವ್ಯಾಕ್ಸಿನ್‌ ಲಸಿಕೆ ನೀಡಲು ₹ 2 ಸಾವಿರವರೆಗೂ ಪಡೆಯುತ್ತಿವೆ. ಖಾಸಗಿಯವರು ಲಸಿಕೆಗಳನ್ನು ನೇರವಾಗಿ ಕಂಪನಿಯಿಂದ ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕೊರೊನಾ ಸೋಂಕು ಬಾಧಿಸದಂತೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವವರು ಖಾಸಗಿ ಆಸ್ಪತ್ರೆಯಲ್ಲಿ ಕೆಲವರು ದುಬಾರಿ ಬೆಲೆಯಲ್ಲೇ ಲಸಿಕೆ ಪಡೆಯುತ್ತಿದ್ದಾರೆ.‌

ADVERTISEMENT

ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಸದ್ಯ ಯಾವುದೇ ಲಸಿಕೆ ಸಂಗ್ರಹವಿಲ್ಲ. ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಶಿಲ್ಡ್‌ ಲಸಿಕೆ ಲಭ್ಯ ಇರುವುದನ್ನು ಎರಡನೇ ಬಾರಿ ಲಸಿಕೆ ಪಡೆಯುವವರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿದ್ದರೂ ಹೊಸದಾಗಿ ಲಸಿಕೆ ನೀಡುತ್ತಿಲ್ಲ. ಲಸಿಕೆ ಪೂರೈಕೆಯಾದ ಬಳಿಕ ಆರಂಭಿಸಲಾಗುವುದು ಎಂದು ವೈದ್ಯಕೀಯ ಸಿಬ್ಬಂದಿ ಸಮಜಾಯಿಸಿ ನೀಡುತ್ತಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಮುಖ್ಯಮಂತ್ರಿ ಈಚೆಗೆ ಚಾಲನೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಪತ್ರಿಕೆಯ ಸುದ್ದಿಯೊಂದಿಗೆ ಸರ್ಕಾರಿ ಆಸ್ಪತ್ರೆಗೆ ಜನರು ಹೋಗಿ ವಿಚಾರಿಸುವವರ ಸಂಖ್ಯೆ ಹೆಚ್ಚಾಗಿದೆ.

‘18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕುರಿತು ರಾಜ್ಯ ಸರ್ಕಾರದಿಂದ ಇದುವರೆಗೂ ಯಾವುದೇ ಸೂಚನೆ ಬಂದಿಲ್ಲ. ಈ ವಯಸ್ಸಿನವರು ಸಂಖ್ಯೆ ಹೆಚ್ಚಾಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳು ಬೇಕಾಗುತ್ತವೆ. ಜಿಲ್ಲೆಯಲ್ಲಿ ಹೊಸದಾಗಿ ಲಸಿಕೆ ಪೂರೈಕೆ ಆಗಿಲ್ಲ. ಲಸಿಕೆಗಳ ಲಭ್ಯತೆ ಹಾಗೂ ಸರ್ಕಾರದ ಸೂಚನೆ ಇದ್ದರಷ್ಟೆ ಲಸಿಕೆ ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಅಧಿಕಾರಿಗಳು ಹೇಳಿದರು.

ಮೇ 1 ರಿಂದ 4 ರವರೆಗೂ ಜಿಲ್ಲೆಯಲ್ಲಿ 2,247 ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ. ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇದೀಗ ಲಸಿಕೆ ಪೂರೈಕೆ ಇಲ್ಲದೆ, ಅಭಿಯಾನವು ಮಂದಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.