ADVERTISEMENT

ಲಾಕ್‌ಡೌನ್‌ ಮತ್ತಷ್ಟು ಸಡಿಲಿಕೆ ಸನ್ನಿಹಿತ

ಕೋವಿಡ್‌ ನಿಯಮಗಳ ಪಾಲನೆ ಆಗದಿದ್ದರೆ ಮತ್ತೆ ಆತಂಕ

ನಾಗರಾಜ ಚಿನಗುಂಡಿ
Published 17 ಜೂನ್ 2021, 16:20 IST
Last Updated 17 ಜೂನ್ 2021, 16:20 IST
ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ರಿಮ್ಸ್‌ ಆಸ್ಪತ್ರೆಯ ನೋಟ
ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ರಿಮ್ಸ್‌ ಆಸ್ಪತ್ರೆಯ ನೋಟ   

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿಕೆ ಆಗುತ್ತಿದ್ದು, ಲಾಕ್‌ಡೌನ್‌ ಇನ್ನೂ ಸಡಿಲಿಕೆ ಮಾಡುವುದಕ್ಕೆ ಜಿಲ್ಲಾಡಳಿತ ತಯಾರಿ ನಡೆಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯು 490ಕ್ಕೆ ಕುಸಿದಿದೆ. ಗುಣಮುಖರಾಗುವವರ ಸಂಖ್ಯೆ ಏರಿಕೆಯಲ್ಲಿ ಇರುವುದರಿಂದ ಸದ್ಯಕ್ಕೆ ಆತಂಕ ದೂರವಾಗುತ್ತಿದೆ. ರಿಮ್ಸ್‌ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 83 ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ವಿವಿಧ ತಾಲ್ಲೂಕು ಆಸ್ಪತ್ರೆಗಳಲ್ಲಿ 17 ಜನರು ಸೋಂಕಿತರಿದ್ದಾರೆ. ಮನೆಗಳಲ್ಲಿ ಐಸೋಲೇಷನ್‌ ಆಗಿದ್ದವರು ಸಂಖ್ಯೆ 314 ರಷ್ಟಿದೆ. ಎಲ್ಲ ಸೋಂಕಿತರಿಗೂ ಸಮರ್ಪಕವಾಗಿ ಔಷಧೋಪಚಾರವನ್ನು ಆರೋಗ್ಯ ಇಲಾಖೆಯವರು ಮಾಡುತ್ತಿದ್ದಾರೆ.

ಕೋವಿಡ್‌ ಎರಡನೇ ಅಲೆ ಸಂಪರ್ಕ ಕಡಿತ ಆಗಿರುವುದನ್ನು ದೃಢಪಡಿಸಿಕೊಳ್ಳಲು ಪ್ರತಿದಿನ ಗಂಟಲು ದ್ರವ ಸಂಗ್ರಹ ಹೆಚ್ಚಿಸಲಾಗಿದೆ. 1500 ರಿಂದ 2000 ರವರೆಗೂ ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್‌ ಪತ್ತೆ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿದೆ. ಮತ್ತೆ ಸೋಂಕು ವ್ಯಾಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವ ಸವಾಲು ಸಾರ್ವಜನಿಕರ ಮೇಲಿದೆ. ಅಗತ್ಯ ಕ್ರಮ ಜರುಗಿಸುವ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ.

ADVERTISEMENT

ದಿನಸಿ ಹಾಗೂ ತರಕಾರಿ ಖರೀದಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೂ ಅವಕಾಶ ನೀಡಿರುವುದನ್ನು ಇನ್ನಷ್ಟು ಸಮಯ ವಿಸ್ತರಿಸಬಹುದು. ರಾಯಚೂರು ನಗರದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿರುವ ರೀತಿಯಲ್ಲೇ ಒಂದು ಭಾಗದ ಮಳಿಗೆಗಳು ದಿನಬಿಟ್ಟು ದಿನ ತೆರೆಯುವುದಕ್ಕೆ ಅವಕಾಶ ಮಾಡಬಹುದು ಎನ್ನುವ ವಿಷಯ ಚರ್ಚಾಹಂತದಲ್ಲಿದೆ. ಸಾರ್ವಜನಿಕ ಬಸ್‌ಗಳ ಸಂಚಾರವನ್ನು ಹಂತಹಂತವಾಗಿ ಆರಂಭಿಸಲಾಗುತ್ತದೆ ಎನ್ನುವ ಸುಳಿವು ಸಿಕ್ಕಿದೆ.

ಜಾಗೃತಿ ಅಗತ್ಯ: ಕೊರೊನಾ ಸೋಂಕು ಹರಡುವುದನ್ನು ತಡೆಯುವುದಕ್ಕೆ ಅಗತ್ಯ ಕ್ರಮಗಳನ್ನು ಜಿಲ್ಲೆಯಾದ್ಯಂತ ಮುಂದುವರಿಸಲಾಗುತ್ತದೆ. ಪ್ರತಿವರ್ಷ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳು ಕೋವಿಡ್‌ ಸೋಂಕು ವ್ಯಾಪಕವಾಗುವುದು ಕಂಡುಬರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್‌ ಧರಿಸುವುದನ್ನು ಮುಂದುವರಿಸಲು ತಿಳಿಸಲಾಗುತ್ತಿದೆ.

ಕೋವಿಡ್‌ ಮೂರನೇ ಅಲೆ ಆರಂಭವಾಗುವ ಸಾಧ್ಯತೆಯನ್ನು ತಜ್ಞರು ಹೇಳಿರುವುದರಿಂದ ಜಿಲ್ಲೆಯಲ್ಲಿ ಈಗಗಾಲೇ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳನ್ನು ಹೊಂದಿಸಿಕೊಳ್ಳುವ ಕಾರ್ಯವನ್ನು ಜಿಲ್ಲಾಡಳಿತವು ಹಂತಹಂತವಾಗಿ ಮಾಡುತ್ತಿದೆ. ಮಕ್ಕಳ ಆರೋಗ್ಯ ಸಂರಕ್ಷಣೆಗೆ ಜಿಲ್ಲೆ, ತಾಲ್ಲೂಕುಗಳ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದನ್ನು ಪೂರ್ವತಯಾರಿ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.