ADVERTISEMENT

ರಾಯಚೂರು: ಬೆಲೆ ಏರಿಕೆ, ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಭಾರತ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 14:40 IST
Last Updated 21 ಏಪ್ರಿಲ್ 2025, 14:40 IST
ರಾಯಚೂರಿನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು  ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು  ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು    

ರಾಯಚೂರು: ಕೇಂದ್ರ, ರಾಜ್ಯ ಸರ್ಕಾರದ ಬೆಲೆ ಏರಿಕೆ ಹಾಗೂ ವಕ್ಫ್ ಕಾಯ್ದೆ ವಾಪಾಸ್ ಪಡೆಯುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ನಗರದ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ.  ಪ್ರತಿ ಸಿಲಿಂಡರ್‌ಗೆ ₹ 50 ಹೆಚ್ಚಳ ಮಾಡಲಾಗಿದೆ. ಈ ಬೆಲೆ ಏರಿಕೆಯಿಂದಾಗಿ ಸಾಮಾನ್ಯ, ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಇದರಿಂದ ₹7 ಸಾವಿರ ಕೋಟಿ ಹೊರೆ ಏರಿಸಲಾಗಿದೆ. ಪೆಟ್ರೋಲ್, ಡೀಸೆಲ್ ಎರಡರ ಮೇಲೆ ₹32 ಸಾವಿರ ಕೋಟಿಯಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.

ಹಣದುಬ್ಬರದಿಂದ ಈಗಾಗಲೇ ಜನರ ಜೀವನ ಕಷ್ಟದಲ್ಲಿದೆ. ಬೆಲೆ ಏರಿಕೆಯಿಂದ ಜನರ ಬದುಕು ಮತ್ತಷ್ಟು ಕಷ್ಟಕ್ಕೆ ದೂಡಲಾಗಿದೆ. ವಿಶೇಷವಾಗಿ ಅಬಕಾರಿ ಸುಂಕದ ಹೆಸರಿನಲ್ಲಿ ಒಕ್ಕೂಟದ ತತ್ವಗಳನ್ನು ಗಾಳಿಗೆ ತೂರಿ, ಕೇಂದ್ರ ಸರ್ಕಾರ ಜನ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲು, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ  ಇದೆ. ಇದರಿಂದ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳು ಕೈಗೆಟುಕದಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಿ ಬೆಲೆ ಏರಿಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ನವ ಉದಾರವಾದಿ ನೀತಿಗಳನ್ನು ವೇಗವಾಗಿ ಜಾರಿ ಮಾಡುವಲ್ಲಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಜನವಿರೋಧಿ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳೂ ಪರಸ್ಪರ ಬೆಲೆ ಏರಿಕೆಯ ಬಗ್ಗೆ ಕೆಸರಾಟದಲ್ಲಿ ತಲ್ಲೀನವಾಗಿವೆ. ಜನರ ಹಿತವನ್ನು ಮೂಲೆ ಗುಂಪು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ಮೂಲಕ ಜನ ವಿಭಜನೆ ನೀತಿ ಅನುಸರಿಸುತ್ತಿದೆ. ಇದು ಒಂದು ಸಮುದಾಯದ ಮೇಲಿನ ದಾಳಿಯಾಗಿದೆ. ಹಿಂದುತ್ವದ ಕಾರ್ಯಾಸೂಚಿಯನ್ನು ಮುಂದು ಮಾಡಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ, ಜನ ವಿರೋಧಿ ಕಾನೂನುಗಳನ್ನು ರೂಪಿಸಲು ಮುಂದಾಗಿದೆ ಎಂದು ದೂರಿದರು.

ನಂತರ ಪತ್ರವನ್ನು ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೆ.ಜಿ.ವೀರೇಶ, ಎಚ್.ಪದ್ಮಾ, ನರಸಿಂಹ, ಹುಲಿಗೆಪ್ಪ, ಆಂಜನೇಯ, ಲಕ್ಷ್ಮಣ, ಗೋಕಾರಮ್ಮ, ಇಂದಿರಾ, ಚಂದ್ರಕಲಾ, ಡಿ.ಎಸ್. ಶರಣಬಸವ, ಆಂಜಿನಮ್ಮ, ಭೀಮಪ್ಪ, ಮಲ್ಲಿಕಾರ್ಜುನ ಹಾಗೂ ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.