ADVERTISEMENT

ರಾಯಚೂರು ನಗರಸಭೆ ಸದಸ್ಯೆ ವಿರುದ್ಧ ಕ್ರಿಮಿನಲ್‌ ಕೇಸ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 13:15 IST
Last Updated 5 ನವೆಂಬರ್ 2020, 13:15 IST
ರಾಯಚೂರು ನಗರಸಭೆ
ರಾಯಚೂರು ನಗರಸಭೆ   

ರಾಯಚೂರು: ರಾಯಚೂರು ನಗರಸಭೆ ಸದಸ್ಯೆ ರೇಣಮ್ಮ ಭೀಮರಾಯ ಅವರು ಚುನಾವಣೆಗೆ ಸ್ಪರ್ಧಿಸಲು ಪರಿಶಿಷ್ಟ ಜಾತಿಯವರೆಂದು ಸುಳ್ಳುಜಾತಿ ಪ್ರಮಾಣಪತ್ರ ಸಲ್ಲಿಸಿರುವುದಕ್ಕೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು ಸದರ್‌ ಬಜಾರ್‌ ಠಾಣೆಯಲ್ಲಿ ಗುರುವಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ.

ರೇಣಮ್ಮ ಅವರು ಕಿಳ್ಳಿಕ್ಯಾತ ಜಾತಿಯವರಾಗಿದ್ದರೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಶಿಳ್ಳಿಕ್ಯಾತ ಜಾತಿಯವರೆಂದು ಪ್ರಮಾಣಪತ್ರ ಪಡೆದು ಚುನಾವಣೆಯಲ್ಲಿ ಗೆದ್ದಿದ್ದರು. ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್‌ನಿಂದ ಗೆಲುವು ಸಾಧಿಸಿರುದ್ದನ್ನು ಪ್ರಶ್ನಿಸಿ ಛಲವಾದಿ ಮಹಾಸಭಾ ಪದಾಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು.

ದೂರು ಆಧರಿಸಿ ಪರಿಶೀಲನಾ ಅಂತಿಮ ವರದಿಯನ್ನು ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗೆ ನಿರ್ದೇಶನಾಲಯ ಅಧಿಕಾರಿಗಳು ಸಲ್ಲಿಸಿದ್ದರು. ಈ ವರದಿ ಆಧರಿಸಿ ರೇಣಮ್ಮ ಅವರ ಜಾತಿ ಪ್ರಮಾಣಪತ್ರ ಜಿಲ್ಲಾಧಿಕಾರಿ ರದ್ದುಗೊಳಿಸಿ ಆದೇಶಿಸಿದ್ದರು. ಆನಂತರ ಕಲಬುರ್ಗಿ ಪ್ರಾದೇಶಿಕ ಆಯುಕ್ತರು ನಗರಸಭೆ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರು. ಆದರೆ, ಜಾತಿ ಪ್ರಮಾಣಪತ್ರ ರದ್ದುಗೊಳಿಸಿದ್ದನ್ನು ರೇಣಮ್ಮ ಅವರು ಪ್ರಶ್ನಿಸಿ ಕಲಬುರ್ಗಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅದು ಇನ್ನೂ ವಿಚಾರಣೆ ಹಂತದಲ್ಲಿ ಇರುವಾಗಲೇ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.