ADVERTISEMENT

ಸಿಂಧನೂರು | ಸೈಬರ್ ಅಪರಾಧ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಎಂ.ಪುಟ್ಟಮಾದಯ್ಯ

ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 7:16 IST
Last Updated 13 ಡಿಸೆಂಬರ್ 2025, 7:16 IST
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಶುಕ್ರವಾರ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಶುಕ್ರವಾರ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು   

ಸಿಂಧನೂರು: ‘ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ವಂಚನೆಯಿಂದ ತಪ್ಪಿಸಿಕೊಳ್ಳಲು ಮತ್ತು ತಡೆಯಲ ಯುವಜನರು ಸೇರಿದಂತೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.

ನಗರದ ಟೌನ್‍ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಜಿಲ್ಲಾ ಪೊಲೀಸ್ ಹಾಗೂ ಸಿಂಧನೂರು ಉಪವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಂಪ್ಯೂಟರ್, ಸ್ಮಾರ್ಟ್‌ಫೋನ್ ಹಾಗೂ ಮತ್ತಿತರ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಮಾಡುವ ಕಾನೂನುಬಾಹಿರ ಚಟುವಟಿಕೆಗಳೇ ಸೈಬರ್ ಅಪರಾಧವಾಗಿದೆ. ಇದರಲ್ಲಿ ಫಿಶಿಂಗ್, ಹ್ಯಾಕಿಂಗ್, ಗುರುತಿನ ಕಳವು, ಆನ್‍ಲೈನ್ ವಂಚನೆಗಳು, ಬೆದರಿಸುವಿಕೆ ಸೇರಿದೆ. ಇವುಗಳಿಂದ ವ್ಯಕ್ತಿಗಳ, ಸಂಸ್ಥೆಗಳ ಮತ್ತು ಸರ್ಕಾರಗಳಿಗೆ ಆರ್ಥಿಕ ನಷ್ಟ, ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಸೈಬರ್ ಕ್ರೈಂ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಪಾಲಕರು ಹಾಗೂ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

‘ಜನವರಿಯಿಂದ ಇಲ್ಲಿಯವರೆಗೆ ರಸ್ತೆ ಅಪಘಾತದಲ್ಲಿ ಜಿಲ್ಲೆಯ 262 ಜನ ಮರಣ ಹೊಂದಿದ್ದಾರೆ. 700 ಕ್ಕಿಂತಲೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಆದ್ದರಿಂದ ವಾಹನಗಳ ಮಾಲೀಕರು ಮತ್ತು ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ, ವಿಮೆ ಹೊಂದಿರಬೇಕು. ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ದೇಶದ ಮೂರನೇ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಯನ್ನು ಕವಿತಾಳ ಠಾಣೆ ಪಡೆದುಕೊಂಡ ಹಿನ್ನೆಲೆಯಲ್ಲಿ ಸಬ್‍ ಇನ್‌ಸ್ಪೆಕ್ಟರ್ ಗುರುಚಂದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು.

ಡಿವೈಎಸ್‍ಪಿ ಚಂದ್ರಶೇಖರ.ಜಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವೀರಾರೆಡ್ಡಿ, ಮಾನ್ವಿ ಸರ್ಕಲ್ ಇನ್‌ಸ್ಪೆಕ್ಟರ್ ಸೋಮಶೇಖರ ಕೆಂಚರೆಡ್ಡಿ, ಪಾಟೀಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ, ಪಿಎಸ್‌ಐಗಳಾದ ಯರಿಯಪ್ಪ, ಸುಜಾತ ಉಪಸ್ಥಿತರಿದ್ದರು.

ಲೋಕೇಶ್ ಪ್ರಾರ್ಥಿಸಿದರು. ರೇಣುಕಾ ರೆಡ್ಡಿ ನಿರೂಪಿಸಿದರು. ನಂತರ ಸೈಬರ್ ಮತ್ತು ಸಂಚಾರ ಅಪರಾಧಗಳ ಕುರಿತು ವಿಡಿಯೊ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ಸೈಬರ್ ವಂಚನೆಗಳಾದ ಫಿಶಿಂಗ್ ಡೀಪ್ ಫೇಕ್‍ಗಳು ಮತ್ತು ಆನ್‍ಲೈನ್ ಬೆಟ್ಟಿಂಗ್‍ಗಳಂಥ ಅಪರಾಧಗಳನ್ನು ತಡೆಯಲು ತಂತ್ರಜ್ಞಾನ ಮತ್ತು ತರಬೇತಿ ಮುಖ್ಯವಾಗಿದ್ದು ಸುರಕ್ಷಿತ ಡಿಜಿಟಲ್ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಜಾಗೃತರಾಗಿ ಸಹಕರಿಸಬೇಕಿದೆ
ಎಂ.ಪುಟ್ಟಮಾದಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವಿದ್ಯಾರ್ಥಿಗಳಿಗೆ ನಗದು ಬಹುಮಾನ
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯು ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ’ ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಿತ್ತು. ಆ ಸ್ಪರ್ಧೆಯಲ್ಲಿ ಆಕ್ಸ್‌ಫರ್ಡ್‌ ಕಾಲೇಜಿನ ವಿದ್ಯಾರ್ಥಿ ಜಾಫರ್ ಪ್ರಥಮ ಅನಿಕೇತನ ಕಾಲೇಜು ವಿದ್ಯಾರ್ಥಿ ಗೌತಮ್ ದ್ವಿತೀಯ ಎಲ್‍ಬಿಕೆ ಕಾಲೇಜಿನ ವಿದ್ಯಾರ್ಥಿನಿ ಬಸಮ್ಮ ತೃತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಅಜಯ್ ಪ್ರಥಮ ವಿಸಿಬಿ ಕಾಲೇಜಿನ ವಿದ್ಯಾರ್ಥಿನಿ ಅನ್ನಪೂರ್ಣ ದ್ವಿತೀಯ ಪಾಟೀಲ ಕಾಲೇಜಿನ ವಿದ್ಯಾರ್ಥಿ ಅಮರೇಶ ತೃತೀಯ ಸ್ಥಾನ ಪಡೆದಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜಯಂತಿ ಹಾಗೂ ರಾಷ್ಟ್ರೀಯ ಐಕ್ಯತಾ ದಿನ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಾಸವಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಾರ್ಥನಾ ಪ್ರಥಮ ವಳಬಳ್ಳಾರಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅಮರೇಗೌಡ ದ್ವಿತೀಯ ಹಾಗೂ ವೀರಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವೀರೇಶ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಬಹುಮಾನ ₹5 ಸಾವಿರ ದ್ವಿತೀಯ ಬಹುಮಾನ ₹3 ಸಾವಿರ ತೃತೀಯ ಬಹುಮಾನ ₹2 ಸಾವಿರ ಹಾಗೂ ಪ್ರಶಂಸನೀಯ ಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.