ಸಿಂಧನೂರು: ತಾಲ್ಲೂಕಿನ ಸುಕ್ಷೇತ್ರ ಸಿದ್ದಪರ್ವತ ಅಂಬಾಮಠದಲ್ಲಿ ಅಂಬಾದೇವಿ ದೇವಸ್ಥಾನ ಸಮಿತಿ ಹಾಗೂ ತಾಲ್ಲೂಕಾಡಳಿತದ ಸಹಯೋಗದಲ್ಲಿ ದಸರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಆನೆಯ ಮೇಲೆ ಅಂಬಾದೇವಿಯ ಉತ್ಸವ ಮೂರ್ತಿಯನ್ನು ಇಟ್ಟು ವಿಜೃಂಭಣೆಯಿಂದ ಜಂಬೂ ಸವಾರಿ ನಡೆಸಲಾಯಿತು.
ಸಂಜೆ 5 ಗಂಟೆಗೆ ಮೂಲ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಅಂಬಾದೇವಿಯ ಉತ್ಸವ ಮೂರ್ತಿಯನ್ನು ತಂದು ಬಾಲ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಆನೆಯ ಮೇಲೆ ಉತ್ಸವ ಮೂರ್ತಿಯನ್ನು ಇಟ್ಟು ಉಚ್ಛಾಯಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ಯದ್ದಲದೊಡ್ಡಿಯ ಸುವರ್ಣಗಿರಿ ವಿರಕ್ತ ಮಠದ ಮಹಾಲಿಂಗ ಮಹಾಸ್ವಾಮಿ, ವೆಂಕಟಗಿರಿ ಕ್ಯಾಂಪ್‌ನ ಸಿದ್ದಾಶ್ರಮದ ಸದಾನಂದ ಶರಣರು, ಹುಡಾದ ಕುಮಾರಸ್ವಾಮಿ ಕಂಬಾಳಿಮಠ, ಶಹಾಪುರದ ಶ್ರೀಗಳು, ಪ್ರಧಾನ ಅರ್ಚಕ ಗುರುದತ್ತ ಅವರು ಪುಷ್ಪ ಸಮರ್ಪಣೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಆನೆಯ ಮೇಲೆ ಅಂಬಾದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಡೊಳ್ಳು ಮತ್ತು ವಿವಿಧ ವಾದ್ಯ ಮೇಳದೊಂದಿಗೆ ಮುಂದೆ ಸಾಗುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಭಕ್ತಿ-ಭಾವದಿಂದ ಅಂಬಾದೇವಿಗೆ ಜೈಂಕಾರ ಕೂಗಿದರು.
ರಥ ಬೀದಿ ರಸ್ತೆ ಮೂಲಕ ಬನ್ನಿ ವೃಕ್ಷದವರೆಗೆ ಮೆರವಣಿಗೆ ಸಾಗಿ ಬನ್ನಿ ಹರಿದುಕೊಂಡು ಪುನಃ ದೇವಸ್ಥಾನದ ಮುಂಭಾಗಕ್ಕೆ ಜಂಬೂ ಸವಾರಿ ಆಗಮಿಸಿತು. ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ 11 ದಿನಗಳ ಕಾಲ ಅಂಬಾಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀದೇವಿಯ ಪುರಾಣ ಪ್ರವಚನ ಕಾರ್ಯಕ್ರಮ ಮಂಗಲಗೊಂಡಿತು. ತತ್ವಪದಕಾರ ನಾರಾಯಣಪ್ಪ ಮಾಡಶಿರವಾರ ಹಾಗೂ ಅವರ ತಂಡದಿಂದ ರಾತ್ರಿಯಿಡೀ ಭಜನೆ ಕಾರ್ಯಕ್ರಮ ನಡೆಯಿತು. ಬಯಲಾಟ ಆಕರ್ಷಕವಾಗಿತ್ತು.
ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಡಿವೈಎಸ್‍ಪಿ ಬಿ.ಎಸ್.ತಳವಾರ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಎರಿಯಪ್ಪ ಅಂಗಡಿ, ಮೌನೇಶ ರಾಠೋಡ್, ಮುಖಂಡರಾದ ಬಸವರಾಜ ಹಿರೇಗೌಡರ್, ಆರ್.ಸಿ.ಪಾಟೀಲ, ಅಮರಯ್ಯಸ್ವಾಮಿ ಅಲಬನೂರು, ಶಿವುಕುಮಾರ ಜವಳಿ, ವಿದ್ಯಾಶ್ರೀ ಶಿವರಾಜ ತಂಗಡಗಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ಸೋಮಲಾಪುರ, ಹುಡಾ, ಮುಕ್ಕುಂದಾ, ಸಾಲಗುಂದಾ, ರೌಡಕುಂದಾ, ವೆಂಕಟೇಶ್ವರ ಕ್ಯಾಂಪ್ ಹಾಗೂ ಮತ್ತಿತರ ಗ್ರಾಮಗಳ ಸಹಸ್ರಾರು ಜನರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.